ಬಿಹಾರ: ಖಾಕಿ: ದಿ ಬಿಹಾರ್ ಚಾಪ್ಟರ್ (ಬಯೋಪಿಕ್) ಎಂಬ ವೆಬ್ ಸಿರೀಸ್ನ ಅಸಲಿ ಹೀರೋ ಮತ್ತು ಬಿಹಾರದ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸುದ್ದಿ ಕೇಳಿ ಬರುತ್ತಿದ್ದಂತೆ ಬಿಹಾರದ ಪೊಲೀಸ್ ಇಲಾಖೆ ಅವರನ್ನು ಹುದ್ದೆಯಿಂದ ಅಮಾನತು ಮಾಡಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಬಿ) ಕ್ರಿಮಿನಲ್ ಪಿತೂರಿ ಮತ್ತು 168 (ಸಾರ್ವಜನಿಕ ಸೇವಕ ಕಾನೂನುಬಾಹಿರವಾಗಿ ವ್ಯಾಪಾರದಲ್ಲಿ ತೊಡಗಿರುವುದು) ಅಡಿ ಲೋಧಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಖಾಕಿ ವೆಬ್ ಸರಣಿಗೆ ಲೋಧಾ ಅವರು ಕಪ್ಪುಹಣ ಬಳಸಿದ್ದಾರೆ ಎಂದು ಪೊಲೀಸ್ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಲೋಧಾ ಅವರು ಪುಸ್ತಕ ಬರೆಯಲು ಮತ್ತು ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅಧಿಕಾರ ಹೊಂದಿಲ್ಲ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಸರ್ಕಾರಿ ನೌಕರನಾಗಿದ್ದರೂ, ಮಗಧ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ವೇಳೆಯಲ್ಲಿ ಅವರು ನೆಟ್‌ಫ್ಲಿಕ್ಸ್ ಮತ್ತು ಖಾಕಿ ವೆಬ್ ಸರಣಿಗಳನ್ನು ನಿರ್ಮಿಸುವ ಕಂಪನಿಯಾದ ಫ್ರೈಡೇ ಸ್ಟೋರಿ ಟೆಲ್ಲರ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಅಕ್ರಮವಾಗಿ ಖಾಸಗಿ/ವಾಣಿಜ್ಯ ಚಟುವಟಿಕೆಗಳಿಗೆ ಪ್ರವೇಶಿಸಿದ್ದಾರೆ ಎಂಬುದನ್ನು ಸಹ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಲೋಧಾ ತಮ್ಮ ಸ್ಥಾನವನ್ನು ಹಣಕಾಸಿನ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಒಬ್ಬ ಐಪಿಎಸ್ ಅಧಿಕಾರಿಯಾಗಿ ಹುದ್ದೆಯಲ್ಲಿರುವಾಗಲೇ ಸಿನಿಮಾ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದು ಕಾನೂನು ಬಾಹಿರ. ಆರ್ಥಿಕ ಅಪರಾಧಗಳಲ್ಲಿ ಭಾಗಿ ಆಗುವ ಮೂಲಕ ಕಾನೂನಿನ ಮಾನದಂಡಗಳನ್ನು ಅವರು ಗಾಳಿಗೆ ತೂರಿದ್ದಾರೆ. ಮೇಲ್ನೋಟಕ್ಕೆ ವೈಯಕ್ತಿಕ ಲಾಭದ ಉದ್ದೇಶ ಇಟ್ಟುಕೊಂಡು ಹೀಗೆ ಮಾಡಿರಬಹುದು ಎಂಬ ಆರೋಪ ಕೇಳಿಬಂದಿದೆ.