ಕನ್ನಡ ಚಿತ್ರರಂಗದ ಇಬ್ಬರು ಪ್ರತಿಭಾನ್ವಿತ ನಟರಿಗೆ ಸಿನಿಮಾ ನಿರ್ಮಾಣ ಮಾಡುವ ಕೆಲಸಕ್ಕೆ ಎಂ. ಮುನೇಗೌಡ ಮುಂದಾಗಿದ್ದಾರೆ. ಇವತ್ತು ಎಸ್ವಿಸಿ ಫಿಲ್ಮ್ಸ್ ಪ್ರೊಡಕ್ಷನ್ನ ಮೊದಲ ಚಿತ್ರದ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸುತ್ತಿರುವ ಸಿನಿಮಾಗೆ ಭುವನಂ ಗಗನಂ ಎಂಬ ಟೈಟಲ್ ಇಡಲಾಗಿದೆ. ಈ ಹಿಂದೆ ರಾಜರು ಎಂಬ ಚಿತ್ರ ಮಾಡಿದ್ದ ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಪ್ರಮೋದ್, ಕ್ಲಾಸ್ ಲವ್ ಸ್ಟೋರಿ ಸಿನಿಮಾ ಹುಡುಕುತ್ತಿದ್ದೆ. ಈ ಕಥೆ ಕೇಳಿ ಏನೋ ಇಷ್ಟ ಆಗಿದೆ. ನಾನು ಸಿನಿಮಾದಲ್ಲಿ ಬೇರೆ ರೀತಿ ಕಾಣಿಸ್ತೇನೆ. ಇಡೀ ಸಿನಿಮಾ ನನಗೆ ಬೇರೆ ಮಜಲು ಕ್ರಿಯೇಟ್ ಮಾಡುತ್ತದೆ ಅನ್ನೋ ನಂಬಿಕೆ ಮೇಲೆ ಒಪ್ಪಿಕೊಂಡಿದ್ದೇನೆ ಎಂದರು.
ಪೃಥ್ವಿ ಅಂಬರ್, ಯಾವುದೇ ಸಿನಿಮಾವಾಗಲಿ ಫ್ಯಾಷನೇಟ್ ಆಗಿರುವ ನಿರ್ಮಾಪಕರು, ನಿರ್ದೇಶಕರು ಬೇಕು. ಈ ಸಿನಿಮಾದಲ್ಲಿ ಎರಡೂ ಇದೆ. ನಿರ್ದೇಶಕರ ಜೊತೆ ಈ ಹಿಂದೆ ಕೆಲಸ ಮಾಡಿದ್ದೇನೆ. ನನಗೆ ಟೈಟಲ್ ಬಹಳ ಇಷ್ಟವಾಯ್ತು. ನನ್ನ ಹೆಸರಿನ ಅರ್ಥ ಕೂಡ ಭುವನಂ ಗಗನಂ. ಕಥೆ ಕೇಳಿದಾಗ ನನಗೆ ಬಹಳ ಕನೆಕ್ಟ್ ಆಗಿತ್ತು. ಪ್ರಮೋದ್ ಅದ್ಭುತ ಕಲಾವಿದ. ಇಡೀ ತಂಡದ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.