ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ 'ಭೋಲಾ' ಸಿನಿಮಾ ಮಾರ್ಚ್ 30 ರಂದು ಬಿಡುಗಡೆಯಾಗಿದೆ. ಈ ಚಿತ್ರ ತಮಿಳಿನ 'ಕೈದಿ' ಸಿನಿಮಾದ ಹಿಂದಿ ರಿಮೇಕ್ ಆಗಿದೆ. 'ಭೋಲಾ' ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ಗಳಿಸಿದೆ. ನಾಲ್ಕು ದಿನಗಳಲ್ಲಿ ಚಿತ್ರವು 44.28 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ವಾರಾಂತ್ಯದಲ್ಲಿ ಸಿನಿಮಾವು ಒಳ್ಳೆಯ ಕಲೆಕ್ಷನ್ ಮಾಡಿದ್ದು, ಸೋಮವಾರವೂ 5 ಕೋಟಿ ಗಳಿಸಿದೆ. ಹೀಗಾಗಿ ಭೋಲಾ ಚಿತ್ರವು ಸರಿಸುಮಾರು 49 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ.
ದೇಶದ ಕೆಲವೆಡೆ ಮಂಗಳವಾರ ರಜೆ ಇರುವುದರಿಂದ ಸಿನಿಮಾ 50 ಕೋಟಿ ರೂಗಳ ಮೈಲಿಗಲ್ಲು ದಾಟುವ ನಿರೀಕ್ಷೆ ಇದೆ. ಬಿಡುಗಡೆಯಾದ ಮೊದಲ ದಿನ 11.20 ಕೋಟಿ, ಶುಕ್ರವಾರ 7.40 ಕೋಟಿ, ಶನಿವಾರ 12.20 ಕೋಟಿ, ಭಾನುವಾರ 13.48 ಕೋಟಿ ಮತ್ತು ಸೋಮವಾರ 5 ಕೋಟಿ ರೂಪಾಯಿಗಳನ್ನು ಗಳಿಸಿದೆ. ವಾರಾಂತ್ಯದಲ್ಲಿ ಕೊಂಚ ಹೆಚ್ಚೇ ಜನರು ಸಿನಿಮಾ ವೀಕ್ಷಿಸಿದ್ದಾರೆ. ಹೀಗಾಗಿ ಮುಂದಿನ ವಾರಾಂತ್ಯ ದಾಟುವಾಗ 100 ಕೋಟಿ ತಲುಪುವ ನಿರೀಕ್ಷೆ ಚಿತ್ರತಂಡಕ್ಕಿದೆ.
ಇನ್ನು ತಮಿಳಿನ 'ಕೈದಿ' ಚಿತ್ರವನ್ನೇ ಕೊಂಚ ಬದಲಾಯಿಸಿ ಹಿಂದಿಯಲ್ಲಿ 'ಭೋಲಾ' ಎಂಬುದಾಗಿ ಸಿನಿಮಾ ಮಾಡಲಾಗಿದೆ. ಜೊತೆಗೆ ಹೆಚ್ಚಿನ ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಈಗಾಗಲೇ ತಮಿಳಿನಲ್ಲಿ ವೀಕ್ಷಿಸಿರುವ ಕಾರಣ ನಿರೀಕ್ಷೆ ಮಟ್ಟದಲ್ಲಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲದೇ ಈಗಾಗಲೇ ಐಪಿಲ್ 2023 ಪ್ರಾರಂಭವಾಗಿದ್ದು, ಥಿಯೇಟರ್ಗೆ ತೆರಳಿ ಸಿನಿಮಾ ನೋಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಭೋಲಾ ಸಿನಿಮಾವು ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಅನಾಥ ಹುಡುಗಿಯ ಕಥೆಯನ್ನು ಹೇಳುತ್ತದೆ.