ಸೌತ್ನ ಮೆಗಾ ದಂಪತಿ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಇದಕ್ಕಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಗರ್ಭಾವಸ್ಥೆಯ ಕ್ಷಣಗಳನ್ನು ಆನಂದಿಸುತ್ತಿರುವ ಈ ಜೋಡಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಹುಟ್ಟುವ ಮಗುವಿಗೆ ಪ್ರಜ್ವಲ ಫೌಂಡೇಶನ್ ಸುಂದರವಾದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದೆ.
ಉಪಾಸನಾ ಈ ತೊಟ್ಟಿಲಿನ ಮಹತ್ವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲೈಂಗಿಕ ಕಳ್ಳಸಾಗಣೆ ಕೂಪದಿಂದ ಹೊರಬಂದ ಮಹಿಳೆಯರಿಗೆ ಆಶ್ರಯ ನೀಡುವ ಪ್ರಜ್ವಲ ಫೌಂಡೇಶನ್ ಈ ತೊಟ್ಟಿಲನ್ನು ತಮಗೆ ಉಡುಗೊರೆಯಾಗಿ ನೀಡಿದೆ ಎಂದು ಹೇಳಿದ್ದಾರೆ. ಅಲ್ಲಿರುವ ಕೆಲವು ಮಹಿಳೆಯರೇ ಈ ಸುಂದರ ತೊಟ್ಟಿಲನ್ನು ಸಿದ್ಧಪಡಿಸಿದ್ದಾರೆ. ಅವರು ತಯಾರಿಸಿದ ಈ ತೊಟ್ಟಿಲಿಗೆ ಹೆಚ್ಚಿನ ಮಹತ್ವ ಇದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
"ಅತೀ ಶೀಘ್ರದಲ್ಲೇ ನಾವು ಮೂವರಾಗುತ್ತಿದ್ದೇವೆ. ನನ್ನ ಮಗುವಿಗೆ ನಿಮ್ಮ ಕೈಯಿಂದ ನೀಡಿದ ತೊಟ್ಟಿಲು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದು ಧೈರ್ಯ, ಶಕ್ತಿ, ಸ್ವಾಭಿಮಾನ ಮತ್ತು ಭರವಸೆಯ ಸಂಕೇತವಾಗಿ ನನ್ನ ಮಗುವಿನ ನೆನಪಿನಲ್ಲಿ ಉಳಿಯುತ್ತದೆ. ನಮ್ಮ ಸುಂದರ ಪ್ರಯಾಣದ ಅವಿಭಾಜ್ಯ ಅಂಗವಾಗಿರುವ ಪ್ರಜ್ವಲ ಫೌಂಡೇಶನ್‌ಗೆ ವಿಶೇಷ ಧನ್ಯವಾದಗಳು" ಎಂದು ತೊಟ್ಟಿಲಿನ ಫೋಟೋ ಹಂಚಿಕೊಂಡ ಉಪಾಸನಾ ಕ್ಯಾಪ್ಶನ್ ಬರೆದಿದ್ದಾರೆ.
ಉಡುಗೊರೆಯಾಗಿ ನೀಡಿರುವ ತೊಟ್ಟಿಲನ್ನು ಮರದಿಂದ ಮಾಡಲಾಗಿದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ಕೆಲ ನೆಟ್ಟಿಗರು ಹುಟ್ಟಲಿರುವ ಮಗುವಿಗಾಗಿ ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಹೃದಯದ ಎಮೋಜಿನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಏತನ್ಮಧ್ಯೆ, ಈ ವರ್ಷ ಜುಲೈನಲ್ಲಿ ಉಪಾಸನಾ ಮಗುವಿಗೆ ಜನ್ಮ ನೀಡಲಿದ್ದಾರೆ.