ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹಿಂದೂ ವಿರೋಧಿ ಪೋಸ್ಟ್ ಮಾಡಿರುವ ಆರೋಪ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ನಟ ಚೇತನ್ ಅವರಿಗೆ ಜಾಮೀನು ಮಂಜೂರಾಗಿದೆ. 32ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೆ ಲತಾ ಅವರಿಂದ ಆದೇಶ ಹೊರಡಿಸಲಾಗಿದೆ. 25 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಬರೆಸಿ, ಒಬ್ಬರ ಭದ್ರತೆ ನೀಡಲು ಸೂಚನೆ ನೀಡಲಾಗಿದೆ.
ಜಾಮೀನು ಮಂಜೂರು:ಇದೇ 21ರಂದು ನಟ ಚೇತನ್ ಅಹಿಂಸಾ ಅವರನ್ನು ಶೇಷಾದ್ರಿಪುರಂ ಪೊಲೀಸರು ಅರೆಸ್ಟ್ ಮಾಡಿದ್ದರು. ಎಸಿಎಂಎಂ ಕೋರ್ಟ್‌ಗೆ ನಟ ಚೇತನ್ ಅವರನ್ನು ಹಾಜರುಪಡಿಸಲಾಗಿದ್ದು, ಅಂದು ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ 32ನೇ ಎಸಿಎಂಎಂ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
ಪ್ರಕರಣ: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರು ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು ಎಂದು ಹಿಂದೂಪರ ಕಾರ್ಯಕರ್ತ ಶಿವಕುಮಾರ್ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಮಂಗಳವಾರ ಬೆಳಗ್ಗೆ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಅರೆಸ್ಟ್ ಮಾಡಿದ್ದರು. ಬಲಿಕ ನಗರದ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದು. ಮಂಗಳವಾರ ನಟನಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
FIR: ನಟ ಚೇತನ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಜಾತಿಗಳ ನಡುವೆ ವೈಮನಸ್ಸು ಉಂಟು ಮಾಡಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ. ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಯಿಂದ ವಿವಿಧ ಕೋಮುಗಳ ನಡುವೆ ಘರ್ಷಣೆಗೆ ಪ್ರೇರಣೆ ನೀಡಿರುವ ಚೇತನ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಶಿವಕುಮಾರ್ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿತ್ತು.