ಗಂಧದ ಗುಡಿ - ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಡ್ರಿಮ್ ಪ್ರಾಜೆಕ್ಟ್. ಅಂತೆಯೇ ಈ ಚಿತ್ರವನ್ನ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅಕ್ಟೋಬರ್ 28ರಂದು ಗಂಧದ ಗುಡಿ ಚಿತ್ರವನ್ನ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಪುನೀತ್ ಪರ್ವ ಹೆಸರಲ್ಲಿ ಅಕ್ಟೋಬರ್ 21ರಂದು ಪ್ರೀ ರಿಲೀಸ್ ಕಾರ್ಯಕ್ರಮವನ್ನ ಬಹಳ ಗ್ರ್ಯಾಂಡ್ ಆಗಿ ಮಾಡಲು, ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಜವಂಶದ ಅಭಿಮಾನಿಗಳು ನಿರ್ಧರಿಸಿದ್ದಾರೆ.
ಗಂಧದ ಗುಡಿ ಸಿನಿಮಾ ಪೋಸ್ಟರ್ ಈ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರು ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಲಿದ್ದಾರೆ. ಇನ್ನು ಪವರ್ ಸ್ಟಾರ್ ಇಲ್ಲದೇ ಗಂಧದ ಗುಡಿಗೆ ಸಿನಿಮಾಗೆ ಏನೆಲ್ಲ ಶಕ್ತಿ ತುಂಬಬೇಕೋ ಆ ಕೆಲಸವನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾಡುತ್ತಿದ್ದಾರೆ.
ಈ ಮಧ್ಯೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಅಪ್ಪು ಕೋಟ್ಯಾಂತರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಅಶ್ವಿನಿಯವರು ಗಂಧದ ಗುಡಿ ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಗಂಧದ ಗುಡಿಯ ಆಶಯವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಹೇಳಿದ್ದಾರಂತೆ. ಪುನೀತ್ ರಾಜ್‍ಕುಮಾರ್ ಕಂಡ ಕನಸಿನ ಬಗ್ಗೆ ಹಾಗೂ ಅಭಿಮಾನಿಗಳ ಬಗ್ಗೆ ಅಶ್ವಿನಿಯವರು ತಮ್ಮ ಮನದಾಳದ ಮಾತುಗಳನ್ನ ಹೇಳಿದ್ದಾರಂತೆ. ಈ ಗಂಧದ ಗುಡಿ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್, ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ರಾಜ್‌ಕುಮಾರ್ ಧ್ವನಿಯನ್ನು ಕೇಳಬಹುದಾಗಿದೆ.
ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆಸಬೇಕೆಂಬ ಕನಸು: ಇನ್ನು ಪುನೀತ್ ರಾಜ್‍ಕುಮಾರ್ ಒಬ್ಬ ಸ್ಟಾರ್ ನಟನಾಗಿರದೆ, ಸಾಮಾಜಿಕ ಕಳಕಳಿ, ಪರಿಸರದ ಬಗ್ಗೆ ಕಾಳಜಿ ಹೊಂದಿದ್ದರು. ಅಲ್ಲದೇ, ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎಂಬ ಕನಸು ಕಂಡಿದ್ದರು. ಅದರಲ್ಲಿ ಈ ಗಂಧದ ಗುಡಿಯು ಒಂದು. ಕರ್ನಾಟಕದ ಅರಣ್ಯ ಸಂಪತ್ತು, ವನ್ಯಜೀವಿಗಳ ಬದುಕು ಸೇರಿದಂತೆ ಅನೇಕ ಸಂಗತಿಗಳನ್ನು ಗಂಧದ ಗುಡಿ ಚಿತ್ರದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ಶೂಟಿಂಗ್: ವೈಲ್ಡ್ ಫೋಟೋಗ್ರಾಫರ್ ಅಮೋಘ ವರ್ಷ ಸಹಯೋಗದಲ್ಲಿ ಈ ಚಿತ್ರವನ್ನ ಚಿತ್ರೀಕರಣ ಮಾಡಲಾಗಿದೆ. ಈ ಪ್ರಾಜೆಕ್ಟ್ ಮೇಲೆ ಪುನೀತ್ ರಾಜ್‍ಕುಮಾರ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ತುಂಬಾ ಕಾಳಜಿ ವಹಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದರು. ಅದರ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್ ರಾಜ್‍ಕುಮಾರ್ ಇಹಲೋಕ ತ್ಯಜಿಸಿದ್ದು ಮಾತ್ರ ತುಂಬಲಾರದ ನಷ್ಟ ಆಗಿದೆ.
ಓದಿ:ಜಯರಾಜ್-ಕೊತ್ವಾಲ್ ಕಾಳಗ ಜೋರಾಗಿರಲಿದೆ: ಹೆಡ್ಬುಷ್ ನಟ ವಸಿಷ್ಠ ಸಿಂಹ