ಕನ್ನಡದ ಯುವರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಇಡೀ ಕರ್ನಾಟಕವೇ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ ಮಾಡುತ್ತಿದೆ. ಅಪ್ಪು ಅವರ ಸಮಾಧಿಗೆ ಸಹಸ್ರಾರು ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರನ್ನು ಜೀವಂತವಾಗಿರಿಸಿರುವ ಅಭಿಮಾನಿಗಳಿಗೆ ಟ್ವಿಟ್ಟರ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಮನ ಸಲ್ಲಿಸಿದ್ದಾರೆ.
'ನೆನಪಿನ ಸಾಗರದಲ್ಲಿ ಒಂದು ವರ್ಷ' ಎಂಬ ಪೋಸ್ಟ್ ಹಂಚಿಕೊಂಡಿದ್ದು, ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬಗಳು, ಅಭಿಮಾನಿಗಳು, ಅವರ ಸ್ನೇಹಿತರು ನನ್ನ ಬೆಂಬಲಕ್ಕೆ ನಿಂತಿದ್ದೀರಿ. ಅಪ್ಪು ಅವರ ಮೇಲಿರುವ ಪ್ರೀತಿ ಹಾಗೂ ಗೌರವದಿಂದ ಅವರನ್ನು ಸದಾ ಜೀವಂತವಾಗಿರಿಸಿದ್ದಕ್ಕಾಗಿ ನಮನಗಳು ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.