ಖ್ಯಾತ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ನಟ ಜೀಶನ್ ಅಯ್ಯೂಬ್ ಅವರು ತಮ್ಮ ಇತ್ತೀಚೆಗಿನ ನವಾಜುದ್ದೀನ್ ಸಿದ್ದಿಕಿ ನಟನೆಯ 'ಹಡ್ಡಿ' ಸಿನಿಮಾದ ಪ್ರಚಾರದ ವೇಳೆ, ಈ ಹಿಂದೆ ಕಂಗನಾ ರಣಾವತ್ ಜೊತೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತನು ವೆಡ್ಸ್ ಮನು (2011), ತನು ವೆಡ್ಸ್ ಮನು ರಿಟರ್ನ್ಸ್ (2015) ಮತ್ತು ಮಣಿಕರ್ಣಿಕಾ (2019) ಚಿತ್ರಗಳಲ್ಲಿ ಕಂಗನಾ ರಣಾವತ್ ಅವರು ಜೀಶನ್ ಅಯ್ಯೂಬ್ ಜೊತೆ ತೆರೆ ಹಂಚಿಕೊಂಡಿದ್ದರು.
'ಹಡ್ಡಿ' ಸಿನಿಮಾ ಪ್ರಚಾರದ ವೇಳೆ ಜೀಶನ್ ಅಯ್ಯೂಬ್ ಅವರು ಕಂಗನಾ ರಣಾವತ್ ಅವರ ಅದ್ಭುತ ಅಭಿನಯವನ್ನು ಶ್ಲಾಘಿಸಿದರು. ಅವರನ್ನು 'ಉತ್ಕೃಷ್ಟ' (superlative) ನಟಿ ಎಂದು ಬಣ್ಣಿಸಿದರು. ಈ ಹೊಗಳಿಕೆಯನ್ನು ಮುಂದುವರೆಸಿದ ನಿರ್ಮಾಪಕ ಅನುರಾಗ್ ಕಶ್ಯಪ್, "ಕಂಗನಾ ರಣಾವತ್ ಅತ್ಯುತ್ತಮ ನಟಿ. ಕೆಲಸದ ವಿಚಾರಕ್ಕೆ ಬಂದರೆ ತುಂಬಾ ಪ್ರಾಮಾಣಿಕಳು. ಅವಳಿಗೆ ಇತರೆ ಸಮಸ್ಯೆಗಳಿವೆ. ಆದರೆ ಆಕೆಯ ಪ್ರತಿಭೆಯನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳಿದರು.
ಅನುರಾಗ್ ಕಶ್ಯಪ್ ಅವರು ಕಂಗನಾ ರಣಾವತ್ ಅವರನ್ನು ಅದ್ಭುತ ಪ್ರತಿಭೆ ಎಂದು ಒಪ್ಪಿಕೊಂಡರು. ಜೊತೆಗೆ ಅವರೊಂದಿಗೆ ವ್ಯವಹರಿಸುವಾಗ ಎದುರಾಗುವ ಸವಾಲುಗಳ ಬಗ್ಗೆ ಸುಳಿವು ನೀಡಿದರು. "ಕಂಗನಾ ರಣಾವತ್ ಅವರು ಒಬ್ಬ ನಟಿ ಮತ್ತು ಅತ್ಯಂತ ಪ್ರಾಮಾಣಿಕಳು. ಆದರೆ, ಅವಳೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ" ಎಂದು ಬಹಿರಂಗಪಡಿಸಿದರು.
ಈ ಹಿಂದೆ 2013ರಲ್ಲಿ ಅನುರಾಗ್ ಕಶ್ಯಪ್ ಮತ್ತು ಕಂಗನಾ ರಣಾವತ್ 'ಕ್ವೀನ್' ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈ ಸಿನಿಮಾವನ್ನು ವಿಕ್ರಮಾದಿತ್ಯ ಮೋಟ್ವಾನೆ, ಮಧು ಮಾಂಟೆನಾ ಮತ್ತು ನಿರ್ದೇಶಕ ವಿಕಾಸ್ ಬಹ್ಲ್ ಜೊತೆಗೆ ಅನುರಾಗ್ ಸಹ ಮಾಲೀಕತ್ವದ ಸಂಸ್ಥೆ ಫ್ಯಾಂಟಮ್ ಫಿಲ್ಮ್ಸ್ ನಿರ್ಮಿಸಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಿಲ್ಲ. ಅನುರಾಗ್ ಕಶ್ಯಪ್ ಅವರು ಒಮ್ಮೆ ಕಂಗನಾ ಅವರಿಗೆ 'ಸಾಂದ್ ಕಿ ಅಂಖ್' ಸಿನಿಮಾದಲ್ಲಿ ನಟಿಸಲು ಆಫರ್ ನೀಡಿದಾಗ ಅದನ್ನು ತಿರಸ್ಕರಿಸಿದ್ದರು. ಈ ಚಿತ್ರದಲ್ಲಿ ಅಂತಿಮವಾಗಿ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ನಟಿಸಿದ್ದರು.
ಕೆಲ ವರ್ಷಗಳ ಹಿಂದೆ, ಅನುರಾಗ್ ಕಶ್ಯಪ್ ಅವರು 'ಹೊಸ ಕಂಗನಾ' ಎಂದು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದರು. ಮುಂಚೆಯಿದ್ದ ಕಂಗನಾ ಕಾಲಾಂತರದಲ್ಲಿ ಬದಲಾಗಿರುವುದಾಗಿ ಹೇಳಿದ್ದರು. ಅವಳು ಯಾವಾಗಲೂ ನನ್ನೆಲ್ಲಾ ಸಿನಿಮಾಗಳಿಗೆ ಬೆಂಬಲಿಸುತ್ತಿದ್ದಳು. ನನಗೆ ಆಕೆ ಆತ್ಮೀಯ ಸ್ನೇಹಿತಳಾಗಿದ್ದಳು. ಆದರೆ ಪ್ರಸ್ತುತ ದಿನಗಳಲ್ಲಿ ಅವೆಲ್ಲವನ್ನೂ ಆಕೆ ಬದಲಾಯಿಸಿದ್ದಾಳೆ. ಸದ್ಯ ದೇಶಪ್ರೇಮದ ಬಗ್ಗೆ ಹೆಚ್ಚು ನಿಲುವು ತೋರುತ್ತಿದ್ದಾಳೆ ಎಂದು ಸರಣಿ ಟ್ವೀಟ್ಗಳನ್ನು ಮಾಡಿದ್ದರು.
ಅನುರಾಗ್ ಕಶ್ಯಪ್ ಅವರ ಈ ಪೋಸ್ಟ್ಗೆ ಕಂಗನಾ ರಣಾವತ್ ಅವರು ಪ್ರತಿಕ್ರಿಯಿಸಿದ್ದರು. ತನ್ನ ತತ್ವಗಳಿಗೆ ಮತ್ತು ತನ್ನ ರಾಷ್ಟ್ರಕ್ಕೆ ನೀಡಿರುವ ಬದ್ಧತೆ. ಈ ವಿಚಾರಗಳಲ್ಲಿ ಇಟ್ಟುಕೊಂಡಿರುವ ನಂಬಿಕೆಯನ್ನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ, ತಾನೊಬ್ಬಳು ದೇಶದ ಗೌರವಕ್ಕಾಗಿ ಧ್ವನಿ ಎತ್ತುವ, ಘನತೆ ಮತ್ತು ಸ್ವಾಭಿಮಾನಕ್ಕಾಗಿ ಬದುಕುವ ಯೋಧ ಎಂಬುದಾಗಿ ತಮ್ಮನ್ನು ತಾವೇ ಬಣ್ಣಿಸಿಕೊಂಡಿದ್ದರು.
ಇದನ್ನೂ ಓದಿ:ನನ್ನ ಜೀವನಕ್ಕೆ ಅವರ ಹೊಗಳಿಕೆಯೇ ಸಾಕು: ಕಂಗನಾ ಭಾವುಕ ನುಡಿ