ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾದ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಜರುಗಿತು. ಈ ಅದ್ಧೂರಿ ಕಾರ್ಯಕ್ರಮಕ್ಕೆ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಪತ್ನಿ ಜೊತೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಶಿವರಾಜ್ ಕುಮಾರ್ ವೇದಾ ಸಿನಿಮಾ ಹಾಗು ಗೀತಾ ಪಿಕ್ಚರ್ಸ್ ಬ್ಯಾನರ್ ಬಗ್ಗೆ ಮಾತು ಶುರು ಮಾಡಿದ ಅನಿಲ್ ಕುಂಬ್ಳೆ, ಡಾ. ರಾಜ್ಕುಮಾರ್ ಕುಟುಂಬದ ಜೊತೆಗಿರುವ ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡರು.
ಪುನೀತ್ ರಾಜ್‍ಕುಮಾರ್ ಇದ್ದಾಗ ಶಿವಣ್ಣ ಗೀತಾ ಪಿಕ್ಚರ್ಸ್ ಬ್ಯಾನರ್ ಅನ್ನು ಲಾಂಚ್ ಮಾಡೋದಿಕ್ಕೆ ನೀವು ಬರಬೇಕು ಅಂತಾ ಪುನೀತ್ ಸಮ್ಮುಖದಲ್ಲಿ ಫೋನ್ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅಪ್ಪು ನಮ್ಮನ್ನು ಅಗಲಿದ್ದಾರೆ. ಅಪ್ಪು ಅಗಲಿದರೂ ಅವರು ಯಾವತ್ತೂ ನಮ್ಮ ಜೊತೆನೇ ಇರುತ್ತಾರೆ ಅಂತಾ ಪುನೀತ್ರನ್ನು ಸ್ಮರಿಸಿದರು.
ಕನ್ನಡ ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್ ಕುಟುಂಬ ಅಪಾರ ಕೊಡುಗೆ ನೀಡಿದೆ. ಶಿವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗು ಪುನೀತ್ ರಾಜ್ಕುಮಾರ್ಗೆ ಕ್ರಿಕೆಟ್ ಅಂದ್ರೆ ಪ್ರೀತಿ. ಅದರಲ್ಲೂ ನಮ್ಮ ಕನ್ನಡದ ಆಟಗಾರರ ಮೇಲೆ ತುಂಬಾನೇ ಪ್ರೀತಿ ಗೌರವ ಇಟ್ಟುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮ್ಯಾಚ್ ಆಗುವಾಗ ಅಪ್ಪು, ಶಿವಣ್ಣ ಎಲ್ಲರೂ ಬರುತ್ತಿದ್ದರು ಎಂದರು.