ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ದಂಪತಿ ತಮ್ಮ ದಾಂಪತ್ಯ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಬಿಗ್ ಬಿ ಮಗಳು ಶ್ವೇತಾ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ತಂದೆ- ತಾಯಿಯ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅವರಿಬ್ಬರ ಬಗ್ಗೆ ಸುಂದರ ಟಿಪ್ಪಣಿಯನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳು ಲೈಕ್ಸ್ಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಇನ್ಸ್ಟಾದಲ್ಲಿ ಬ್ಲ್ಯಾಕ್ ಅಂಡ್ ವೈಟ್ ಫೋಟೋವನ್ನು ಹಂಚಿಕೊಂಡು, "50 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಈಗ ನೀವು ಗೋಲ್ಡನ್ ಆಗಿದ್ದೀರಿ. ಸುದೀರ್ಘ ದಾಂಪತ್ಯದ ರಹಸ್ಯವೇನು ಎಂದು ತಾಯಿಯಲ್ಲಿ ಕೇಳಿದಾಗ ಆಕೆ ಉತ್ತರಿಸಿದಳು- ಪ್ರೀತಿ" ಎಂದು ಸುಂದರ ವಾಕ್ಯಗಳನ್ನು ಬರೆದಿದ್ದಾರೆ. ಫೋಟೋದಲ್ಲಿ ಜಯಾ ಬಚ್ಚನ್ ಸೀರೆ ಧರಿಸಿ ತಮ್ಮ ಗಂಡನನ್ನು ನೋಡಿ ನಗುತ್ತಿದ್ದಾರೆ. ಅಮಿತಾಭ್ ಬಚ್ಚನ್ ಅವರು ಹಳೆ ಸ್ಟೈಲ್ನ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಹೆಂಡತಿಯನ್ನು ನೋಡುತ್ತಿರುವುದು ಕಾಣಬಹುದು.
ಇದನ್ನೂ ಓದಿ:ವಿಕ್ಕಿ, ಸಾರಾ ನಟನೆಯ 'ಜರಾ ಹಟ್ಕೆ ಜರಾ ಬಚ್ಕೆ' ಓಟ ಆರಂಭ: ಮೊದಲ ದಿನದ ಸಂಪಾದನೆ ಇಷ್ಟು!
ಈ ಫೋಟೋ ತುಂಬಾ ಹಳೆಯದಾದರು ವಿಶೇಷವಾಗಿದೆ. ನೆಟ್ಟಿಗರು ಶ್ವೇತಾ ಬಚ್ಚನ್ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದು, ದಂಪತಿಗೆ 50ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಅಭಿಮಾನಿಯೊಬ್ಬರು, ಅವರಿಗೆ ವಾರ್ಷಿಕೋತ್ಸವದ ಶುಭಾಶಯಗಳು. ನೀವು 50 ಮತ್ತು ಅದಕ್ಕೂ ಹೆಚ್ಚು ವರ್ಷ ಒಟ್ಟಾಗಿ ಬಾಳಿರಿ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಎಂದು ಪ್ರತಿಕ್ರಿಯಿಸಿದ್ದಾರೆ.