ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅಭಿಮಾನಿಗಳಿಗೊಂದು ಗುಡ್ ನ್ಯೂಸ್. ನಿಮ್ಮ ಮೆಚ್ಚಿನ ನಟ ಮತ್ತೆ ಕೆಲಸ ಆರಂಭಿಸಿದ್ದಾರೆ. ತಮ್ಮ ಮುಂದಿನ ಚಿತ್ರದ ಶೂಟಿಂಗ್ ಸೆಟ್ಗೆ ಮರಳಿದ್ದಾರೆ. ಹೌದು, ಪ್ರಾಜೆಕ್ಟ್ ಕೆ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರು ಸದ್ಯ ಚೇತರಿಸಿಕೊಂಡಿದ್ದಾರೆ. ಮತ್ತೆ ಶೂಟಿಂಗ್ನಲ್ಲಿ ಭಾಗಿ ಆಗಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಬ್ಲಾಗ್ನಲ್ಲಿ ಶೇರ್ ಮಾಡಿದ್ದಾರೆ.
ಶೂಟಿಂಗ್ ಸೆಟ್ಗೆ ಸಂಬಂಧಿಸಿದ ಹಲವು ಫೋಟೋಗಳ ಜೊತೆಗೆ ತಾವು ಮೇಕಪ್ ಹಾಕಿಕೊಳ್ಳುತ್ತಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ನಾನು ಕೆಲಸಕ್ಕೆ ಮರಳಿದ್ದೇನೆ ಎಂಬ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. ಒಂದು ಫೋಟೋದಲ್ಲಿ ಬಿಗ್ ಬಿ ತಮ್ಮ ಈ ಚಿತ್ರ ತಂಡದೊಂದಿಗೆ ಚರ್ಚಿಸುತ್ತಿರುವುದು ಕಂಡುಬಂದಿದೆ. ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ಮೆಚ್ಚಿನ ನಟನ ಆರೋಗ್ಯ ಚೇತರಿಸಿಕೊಂಡಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
80ರ ಹರೆಯದಲ್ಲೂ ಅಮಿತಾಭ್ ಬಚ್ಚನ್ ಅವರಿಗಿರುವ ಚಿತ್ರಗಳ ಮೇಲಿನ ಸಮರ್ಪಣಾ ಮನೋಭಾವ ನೋಡಿದರೆ ಅಚ್ಚರಿ ಪಡಲೇಬೇಕು. ಶೂಟಿಂಗ್ ಸೆಟ್‌ಗಳಲ್ಲಿ ಅವರು ಬಹಳ ಎನರ್ಜಿಟಿಕ್ ಆಗಿ ಇರುತ್ತಾರೆ. ಭಾನುವಾರದಂದು ನಿಯಮಿತವಾಗಿ ತಮ್ಮ ಅಭಿಮಾನಿಗಳನ್ನು ಸಹ ಭೇಟಿಯಾಗುತ್ತಾರೆ. ಆದರೆ ಅನಾರೋಗ್ಯ ಹಿನ್ನೆಲೆ ಕೆಲ ವಾರಗಳ ಕಾಲ ಈ ಭೇಟಿಯನ್ನು ರದ್ದುಗೊಳಿಸಲಾಗಿತ್ತು.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಪ್ರಾಜೆಕ್ಟ್ ಕೆ ಸಿನಿಮಾದ ಫೈಟ್ ಸೀನ್ ವೇಳೆ ಅಮಿತಾಭ್ ಅವರು ಗಾಯಗೊಂಡಿದ್ದರು. ಮಾರ್ಚ್ 4ರಂದು ಈ ಘಟನೆ ನಡೆದಿತ್ತು. ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮುಂಬೈನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದರು. ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕೆಲ ವಾರಗಳ ಕಾಲ ವಿಶ್ರಾಂತಿ ಪಡೆದರು. ಗಾಯಗಳು ಬಹುತೇಕ ವಾಸಿಯಾಗುತ್ತಿದ್ದಂತೆ ಮತ್ತೆ ಚಿತ್ರದ ಶೂಟಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ.