ಮುಂಬೈ: ಮಣಿಪುರ ಹಿಂಸಾಚಾರದ ವೇಳೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವ ವಿಡಿಯೋ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇಂದು ಸಂಸತ್ತಿನ ಉಭಯ ಸದನಗಳಲ್ಲೂ ಈ ವಿಚಾರ ಪ್ರತಿಧ್ವನಿಸಿತು. ಪ್ರಧಾನಿ ನರೇಂದ್ರ ಮೋದಿ ಕೂಡಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅಕ್ಷಯ್ ಕುಮಾರ್ ಟ್ವೀಟ್: ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅಕ್ಷಯ್ ಕುಮಾರ್, ''ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ನೋಡಿ ಬೆಚ್ಚಿಬಿದ್ದೆ. ಅಸಹ್ಯವಾಯಿತು. ಇಂತಹ ಭಯಾನಕ ಕೃತ್ಯ ಎಸಗಲು ಮತ್ತೊಮ್ಮೆ ಯಾರೂ ಕೂಡ ಯೋಚನೆ ಮಾಡಬಾರದು. ದುಷ್ಕರ್ಮಿಗಳಿಗೆ ಅಂತಹ ಶಿಕ್ಷೆಯಾಗಲಿದೆ ಎಂಬ ವಿಶ್ವಾಸವಿದೆ" ಎಂದು ಬರೆದಿದ್ದಾರೆ.
ರಸ್ತೆಯಲ್ಲಿ ದೌರ್ಜನ್ಯ ಎಸಗಿರುವ ನೀಚ ಕೃತ್ಯಕ್ಕೆ ಸಂಬಂಧಿಸಿದಂತೆ, ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ಮೇಘಚಂದ್ರ ಸಿಂಗ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. "2023ರ ಮೇ 4 ರಂದು ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ವಿಡಿಯೋಗೆ ಸಂಬಂಧಿಸಿದಂತೆ, ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ (ತೌಬಲ್ ಜಿಲ್ಲೆ) ಅಪಹರಣ, ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ತನಿಖೆ ಪ್ರಾರಂಭವಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ತೀವ್ರ ತನಿಖೆ ಕೈಗೊಂಡಿದೆ'' ಎಂದು ತಿಳಿಸಿದ್ದಾರೆ.
ಮಣಿಪುರ ರಾಜ್ಯದ ಕಣಿವೆ ಮತ್ತು ಗುಡ್ಡಗಾಡು ಜಿಲ್ಲೆಗಳ ಅಂಚಿನ ಪ್ರದೇಶಗಳಲ್ಲಿ ರಾಜ್ಯ ಪೊಲೀಸ್ ಮತ್ತು ಕೇಂದ್ರ ಪಡೆಗಳು ನಡೆಸುತ್ತಿರುವ ಶೋಧ ಕಾರ್ಯಾಚರಣೆಗಳ ವಿವರಗಳನ್ನು ಸಹ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಾರ್ಯಾಚರಣೆಯೊಂದರಲ್ಲಿ 2 ಶಸ್ತ್ರಾಸ್ತ್ರಗಳು ಮತ್ತು 2 ಮ್ಯಾಗಜೀನ್‌ಗಳನ್ನು ಇಂಫಾಲ್ ಪೂರ್ವದ ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.