'ಆದಿಪುರುಷ್' 2023ರ ಬಹುನಿರೀಕ್ಷಿತ ಸಿನಿಮಾ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟಿಸಿರುವ ಈ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಓಂ ರಾವುತ್ ಆ್ಯಕ್ಷನ್ ಕಟ್ ಹೇಳಿರುವ ಈ ಪೌರಾಣಿಕ ನಾಟಕವು ಮಹಾಕಾವ್ಯ ರಾಮಾಯಣ ಆಧರಿಸಿದ್ದು, ಆಧುನಿಕ ಸ್ಪರ್ಶ ನೀಡಿ ಈ ಸಿನಿಮಾ ಮಾಡಲಾಗಿದೆ.
ರಾಘವ್ (ಶ್ರೀರಾಮ) ಆಗಿ ದಕ್ಷಿಣದ ಸ್ಟಾರ್ ನಟ ಪ್ರಭಾಸ್ ಮತ್ತು ಜಾನಕಿ (ಸೀತೆ) ಆಗಿ ಉತ್ತರದ ಬಹುಬೇಡಿಕೆ ನಟಿ ಕೃತಿ ಸನೋನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರಗಳಾದ ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಲಕ್ಷ್ಮಣನಾಗಿ ಸನ್ನಿ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. 2023ರ ಬಹುನಿರೀಕ್ಷಿತ ಸಿನಿಮಾ ಜೂನ್ 16 ರಂದು ತೆರೆಗೆ ಅಪ್ಪಳಿಸಲಿದೆ. ಈ ಸಂದರ್ಭದಲ್ಲಿ ತಿರುಪತಿಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಿತ್ರ ನಿರ್ಮಾಣ ಸಂಸ್ಥೆ ಹಿಂದೆಂದೂ ನೋಡಿರದ ರೀತಿ ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಈ ಪ್ರೀ ರಿಲೀಸ್ ಸಮಾರಂಭ ಒಂದಷ್ಟು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ.
ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಭಾಸ್ ಅವರ 50 ಅಡಿ ಹೊಲೊಗ್ರಾಮ್ ಪ್ರದರ್ಶನಗೊಳ್ಲಲಿದೆ. ತಿರುಪತಿಯಲ್ಲಿ ಅಯೋಧ್ಯೆ ಹೋಲುವ ಬೃಹತ್ ಸೆಟ್ ಹಾಕಲಾಗಿದೆ. ಶ್ರೀರಾಮ ಮತ್ತು ವೆಂಕಟೇಶ್ವರ ಸ್ವಾಮಿ ಇಬ್ಬರೂ ವಿಷ್ಣುವಿನ ಅವತಾರಗಳು. ಇದನ್ನು ಗಮನದಲ್ಲಿಟ್ಟುಕೊಂಡು, ಅಯೋಧ್ಯೆ ಮತ್ತು ತಿರುಪತಿ ನಡುವಿನ ಆಧ್ಯಾತ್ಮಿಕತೆ ಪ್ರದರ್ಶಿಸುವ ನಿಟ್ಟಿನಲ್ಲಿ ಈ ಸೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ.
1 00 ನರ್ತಕರಿಂದ ನೃತ್ಯ ಮತ್ತು 100 ಗಾಯಕರು ರಾಮಾಯಣಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಲಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿರುವುದು ಗಮನಾರ್ಹ. ಅಲ್ಲದೇ ಸಂಜೆ 6 ಗಂಟೆಗೆ ಚಿತ್ರದ ಮತ್ತೊಂದು ಟ್ರೇಲರ್ ಅನಾವರಣಗೊಳ್ಳಲಿದೆ.