ಕರ್ನಾಟಕ

karnataka

ETV Bharat / entertainment

'ಸೀತೆ ಭಾರತದ ಮಗಳು' ಡೈಲಾಗ್​ ಕಟ್: ಮೊದಲ ದಿನ 80 ಕೋಟಿ ಬಾಚಲಿರುವ ಆದಿಪುರುಷ್​

'ಜಾನಕಿ ಭಾರತದ ಮಗಳು' ಎಂಬ ಡೈಲಾಗ್​ ಅನ್ನು ಆದಿಷುರುಷ್​ ಚಿತ್ರದಿಂದ ತೆಗೆದುಹಾಕಲಾಗಿದೆ.

Adipurush
'ಸೀತೆ ಭಾರತದ ಮಗಳು' ಡೈಲಾಗ್​ ಕಟ್

By

Published : Jun 16, 2023, 1:30 PM IST

ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಬೆಟ್ಟದಷ್ಟು ಕುತೂಹಲ ಮೂಡಿಸಿದ್ದ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ್​​ ಇಂದು 2D ಮತ್ತು 3Dನಲ್ಲಿ ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ತೆರೆಕಂಡಿದೆ. ಮೊದಲ ದಿನ, ಫಸ್ಟ್ ಶೋ ನೋಡಲು ಅಭಿಮಾನಿಗಳು ಥಿಯೇಟರ್‌ಗಳಿಗೆ ಮುಗಿಬಿದ್ದಿದ್ದರೆ, ಮುಂಗಡ ಬುಕ್ಕಿಂಗ್ ಟ್ರೆಂಡ್ ಕೂಡ ಚಿತ್ರದ ಯಶಸ್ಸನ್ನು ಖಚಿತಪಡಿಸಿದೆ.

ಓಂ ರಾವುತ್ ಬರೆದು ನಿರ್ದೇಶಿಸಿರುವ 'ಆದಿಪುರುಷ್​' ಮಹಾಕಾವ್ಯ ರಾಮಾಯಣ ಆಧರಿಸಿದ್ದು, ಆಧುನಿಕ ಸ್ಪರ್ಶ ನೀಡಲಾಗಿದೆ. ಟಿ ಸೀರಿಸ್‌ನಿಂದ ನಿರ್ಮಾಣಗೊಂಡ ಬಹುಭಾಷಾ ಸಿನಿಮಾವನ್ನು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂಬ ಮಾಹಿತಿ ಇದೆ. ಚಿತ್ರವು ವಿಶ್ವಾದ್ಯಂತ ಇಂದು 10,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ (ಭಾರತದಲ್ಲಿ 7,000 ಪರದೆಗಳು, ವಿದೇಶದಲ್ಲಿ 3,000 ಪರದೆಗಳು). ರಾಘವ್ ಪಾತ್ರದಲ್ಲಿ ಪ್ರಭಾಸ್ ಮತ್ತು ಜಾನಕಿ ಪಾತ್ರದಲ್ಲಿ ಕೃತಿ ಸನೋನ್​​ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗ್ರಾಫಿಕ್​ ವಿಚಾರವಾಗಿ ಹಲವರು ಚಿತ್ರತಂಡವನ್ನು ಟೀಕಿಸಿದ್ದಾರೆ. ಆದ್ರೂ ಸದ್ಯದ ಬೆಳವಣಿಗೆ (ಮುಂಗಡ ಟಿಕೆಟ್​ ಬುಕಿಂಗ್​ ಸೇರಿದಂತೆ) ಪ್ರಕಾರ, ಬಾಕ್ಸ್ ಆಫೀಸ್​ನಲ್ಲಿ ಬಂಪರ್ ಓಪನಿಂಗ್ ಮಾಡುವ ನಿರೀಕ್ಷೆಯಲ್ಲಿದೆ ಆದಿಪುರುಷ್​ ತಂಡ.

ಇನ್ನು ನೇಪಾಳದ ರಾಜಧಾನಿಯಲ್ಲಿ ಹಿಂದಿ ಚಲನಚಿತ್ರಗಳ ಪ್ರದರ್ಶನವನ್ನು ನಿಷೇಧಿಸುವುದಾಗಿ ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಮೇಯರ್ ಬಾಲೇಂದ್ರ ಶಾ ಗುರುವಾರದಂದು ಘೋಷಿಸಿದ ನಂತರ ಆದಿಪುರುಷ್​ ಚಿತ್ರದ ನಿರ್ಮಾಪಕರು ಚಿತ್ರದಿಂದ ಸಂಭಾಷಣೆಯೊಂದನ್ನು ತೆಗೆದುಹಾಕಿದ್ದಾರೆ. 'ಜಾನಕಿ ಭಾರತದ ಮಗಳು' ಎಂದು ಹೇಳುವ ಸಂಭಾಷಣೆಯ ಸತ್ಯಾನುಸತ್ಯತೆಯನ್ನು ಬಾಲೇಂದ್ರ ಅವರು ಪ್ರಶ್ನಿಸಿದ್ದರಿಂದ ಈ ಬದಲಾವಣೆ ನಡೆದಿದೆ.

ಸೀತೆಯ ಜನ್ಮಸ್ಥಳದ ಕುರಿತು ಚಿತ್ರದಲ್ಲಿನ ಸಂಭಾಷಣೆಯನ್ನು ಸರಿಪಡಿಸಲು ಬಾಲೇಂದ್ರ ಶಾ ಅವರು ಚಿತ್ರ ತಯಾರಕರಿಗೆ ಮೂರು ದಿನಗಳ ಗಡುವು ನೀಡಿದ್ದರು. "ದಕ್ಷಿಣ ಭಾರತದ ಆದಿಪುರುಷ್ ಚಿತ್ರದಲ್ಲಿರುವ 'ಜಾನಕಿ ಭಾರತದ ಮಗಳು' ಎಂಬ ಸಾಲನ್ನು ನೇಪಾಳದಲ್ಲಿ ಮಾತ್ರವಲ್ಲದೇ ಭಾರತದಲ್ಲೂ (ಪ್ರದರ್ಶನಗೊಳ್ಳುತ್ತಿರುವ ಸಿನಿಮಾದಲ್ಲಿ) ತೆಗೆದುಹಾಕುವವರೆಗೆ, ಕಠ್ಮಂಡುವಿನಲ್ಲಿ ಯಾವುದೇ ಹಿಂದಿ ಚಲನಚಿತ್ರಗಳನ್ನು ಪ್ರದರ್ಶಿಸಲು ಅನುಮತಿಸುವುದಿಲ್ಲ" ಎಂದು ಬಾಲೇಂದ್ರ ಶಾ ತಮ್ಮ ಫೇಸ್‌ಬುಕ್​ನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ:'ಆದಿಪುರುಷ್​' ವೀಕ್ಷಿಸಲು ಥಿಯೇಟರ್​ಗೆ ಬಂದ ಹನುಮಂತ..ವಿಡಿಯೋ ವೈರಲ್​

ನೇಪಾಳದ ಚಲನಚಿತ್ರ ಸೆನ್ಸಾರ್ ಮಂಡಳಿಯು ಸಹ 'ಸೀತೆ ಭಾರತದ ಮಗಳು' ಎಂದು ವಿವರಿಸುವ ಸಂಭಾಷಣೆಯ ಭಾಗವನ್ನು ತೆಗೆದುಹಾಕಿದ ನಂತರವೇ ಆದಿಪುರುಷ್​ ಬಿಡುಗಡೆಗೆ ಅನುಮತಿ ನೀಡುವುದಾಗಿ ಹೇಳಿತ್ತು. ಬಾಲೇಂದ್ರ ಶಾ ಮತ್ತು ನೇಪಾಳದ ಸೆನ್ಸಾರ್ ಮಂಡಳಿಯ ಬೇಡಿಕೆಗೆ ಬದ್ಧರಾಗಿ, ಚಿತ್ರ ತಯಾರಕರು ತಮ್ಮ ಸಿನಿಮಾದಿಂದ ಈ ಸಾಲನ್ನು ( 'ಜಾನಕಿ ಭಾರತದ ಮಗಳು' ) ತೆಗೆದುಹಾಕಿದ್ದಾರೆ. ಈ ಕ್ರಮದ ನಂತರ ನೇಪಾಳ ಚಲನಚಿತ್ರ ಸೆನ್ಸಾರ್ ಮಂಡಳಿಯು ಚಿತ್ರವನ್ನು ಅಂಗೀಕರಿಸಿತು. ರಾಮಾಯಣದ ಪ್ರಕಾರ, ಸೀತೆ ನೇಪಾಳದ ಜನಕಪುರದಲ್ಲಿ ಜನಿಸಿದರು. ಭಗವಾನ್ ಶ್ರೀರಾಮನು ಜಾನಕಿಯನ್ನು ಮದುವೆಯಾದರು.

ಇದನ್ನೂ ಓದಿ:Adipurush: ರಾಮಾಯಣ ಆಧಾರಿತ ಪೌರಾಣಿಕ ಚಿತ್ರದ ಟ್ವಿಟರ್ ವಿಮರ್ಶೆ.. ಹೇಗಿದೆಯಂತಾ ಗೊತ್ತಾ?

ಸಂದರ್ಶನವೊಂದರಲ್ಲಿ ಪಿವಿಆರ್​ ಐನಾಕ್ಸ್​ ಲಿಮಿಟೆಡ್‌ನ ಸಹ ಸಿಇಓ ಗೌತಮ್ ದತ್ತಾ (PVR INOX Limited co-CEO) ಮಾತನಾಡಿ, ಆದಿಪುರುಷ್​ ಆರಂಭಿಕ ದಿನದಂದು 80-85 ಕೋಟಿ ರೂ. ಕಲೆಕ್ಷನ್​ ಮಾಡಲಿದೆ. ಮೊದಲ ವಾರಾಂತ್ಯದಲ್ಲಿ (ಮೂರು ದಿನಗಳಲ್ಲಿ) ಚಿತ್ರ 200 ಕೋಟಿ ರೂ. ಸಂಗ್ರಹಿಸಲಿದೆ ಎಂದು ತಿಳಿಸಿದ್ದಾರೆ.

ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ವೀಕ್ಷಿಸಲು ಮುಂಗಡವಾಗಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಟಿಕೆಟ್​ ಖರೀದಿಸಿದ್ದಾರೆ. ಸಿನಿ ಟ್ರೇಡ್ ಪಂಡಿತರು ಚಿತ್ರವನ್ನು ಸೂಪರ್​ ಹಿಟ್ ಪಠಾಣ್ (1,000 ಕೋಟಿ ಕ್ಲಬ್ ಸೇರಿದ ಚಿತ್ರ) ಸಿನಿಮಾಗೆ ಹೋಲಿಸುತ್ತಿದ್ದಾರೆ.​ ಪ್ರಭಾಸ್ ಅವರ ಸ್ಟಾರ್‌ಡಮ್ ಬಾಕ್ಸ್​ ಆಫೀಸ್​ ವಿಚಾರದಲ್ಲಿ ವರ್ಕ್​ ಆಗಲಿದೆ. ಬಾಹುಬಲಿ ಚಿತ್ರಗಳ ನಂತರ ಪ್ರಭಾಸ್‌ಗೆ ದೊಡ್ಡ ಹೆಸರು ತಂದು ಕೊಡುವ ಸಿನಿಮಾ ಇದಾಗಲಿದೆ ಎಂದು ಅಂದಾಜಿಸುತ್ತಿದ್ದಾರೆ..

ABOUT THE AUTHOR

...view details