ಹೈದರಾಬಾದ್:ಹಿಂದು ಮಹಾಕಾವ್ಯಗಳಲ್ಲಿ ಒಂದಾದ ಪವಿತ್ರ ರಾಮಾಯಾಣ ಆಧರಿತ 'ಆದಿಪುರುಷ್' ಸಿನಿಮಾ ಕೆಟ್ಟ ಸಂಭಾಷಣೆಯಿಂದಾಗಿ ವಿವಾದಕ್ಕೀಡಾಗಿದೆ. ಬಹುನಿರೀಕ್ಷಿತ ಚಿತ್ರದ ವಿರುದ್ಧ ಟೀಕೆಗಳು ಕೇಳಿ ಬರುತ್ತಿರುವ ನಡುವೆಯೇ ಮೂರೇ ದಿನದಲ್ಲಿ ಸಿನಿಮಾ 300 ಕೋಟಿ ಕ್ಲಬ್ ಸೇರಿದೆ.
ಓಂ ರಾವುತ್ ಅವರ ನಿರ್ದೇಶನದ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದು, ಚಿತ್ರ ಬಿಡುಗಡೆಯಾದ ಮೊದಲ ದಿನವೇ 140 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು. ಎರಡನೇ ದಿನ 100 ಕೋಟಿ ರೂಪಾಯಿ ದಾಖಲಿಸಿತ್ತು. ಭಾನುವಾರ ಮೂರನೇ ದಿನ ಚಿತ್ರ ವಿಶ್ವಾದ್ಯಂತ 85 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ನಿರ್ಮಾಣ ಸಂಸ್ಥೆ ಟಿ-ಸಿರೀಸ್ ತಿಳಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾದಂದಿನಿಂದ ಸಿನಿಮಾ ವಿವಾದಗಳ ಸುತ್ತ ಸುತ್ತುತ್ತಿದೆ. ಕಳಪೆ ದೃಶ್ಯ, ದೈವತ್ವಕ್ಕೆ ಹೆಸರಾದ ಶ್ರೀರಾಮ, ಹನುಮಂತನ ಪಾತ್ರಗಳ ಬಾಯಲ್ಲಿ ಟಪೋರಿ ಸಂಭಾಷಣೆ ಹೇಳಿಸಿದ ಕಾರಣಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಅಯೋಧ್ಯೆಯ ಸಂತರು ಸಿನಿಮಾವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಈ ಮಧ್ಯೆ, ಉತ್ತರ ಪ್ರದೇಶದ ಹಜರತ್‌ಗಂಜ್‌ನಲ್ಲಿ ಆದಿಪುರುಷ್ ನಿರ್ಮಾಪಕರ ವಿರುದ್ಧ ಬಲಪಂಥೀಯ ಗುಂಪು ಎಫ್‌ಐಆರ್ ದಾಖಲಿಸಿದೆ. ಸಿನಿಮಾ ಹಿಂದೂ ಭಾವನೆಗಳನ್ನು ಅವಮಾನಿಸಿದೆ ಎಂದು ದೂರಲಾಗಿದೆ.
ಸಂಭಾಷಣೆ ಬದಲಿಗೆ ಒಪ್ಪಿಗೆ:ಹನುಮಂತನ ಪಾತ್ರಧಾರಿಯ ಸಂಭಾಷಣೆಯು ಫುಟ್ಪಾತ್ ಭಾಷೆಯಾಗಿದೆ. ಇದು ಹಿಂದೂ ದೇವರನ್ನು ಅವಮಾನಿಸಲಾಗಿದೆ ಎಂದು ತೀವ್ರ ಟೀಕೆ ವ್ಯಕ್ತವಾಗಿದೆ. ಇದನ್ನು ಸಂಭಾಷಣೆಕಾರ ಮನೋಜ್ ಮುಂತಾಶಿರ್ ಶುಕ್ಲಾ ಆರಂಭದಲ್ಲಿ ಸಮರ್ಥಿಸಿಕೊಂಡಿದ್ದರು. ಬಳಿಕ ಹಲವು ರಾಜಕೀಯ ಪಕ್ಷಗಳು ಸೇರಿದಂತೆ ಹಿಂದು ಪರರಿಂದ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಮಣಿದ ಚಿತ್ರತಂಡ ಆಕ್ಷೇಪಾರ್ಹ ಡೈಲಾಗ್ಗಳಿಗೆ ಕತ್ತರಿ ಹಾಕಲು ಒಪ್ಪಿಕೊಂಡಿದೆ.