ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿ ಸಮಂತಾ ರುತ್ ಪ್ರಭು ಅವರು ಸದ್ಯ ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸುವ ಸಲುವಾಗಿ, ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿದ್ದಾರೆ. ಚೇತರಿಕೆ ನಂತರ ಹೊಸ ಪ್ರಾಜೆಕ್ಟ್ಗಳ ಕಡೆಗೆ ಗಮನ ಹರಿಸಲಿದ್ದಾರೆ. ಸದ್ಯ ಪ್ರವಾಸ, ಧ್ಯಾನ, ದೇವಸ್ಥಾನ ಭೇಟಿ, ಮೂವಿ ಟೈಮ್ ಎಂದು ಬ್ಯುಸಿಯಾಗಿದ್ದಾರೆ. ತಮ್ಮ ದಿನಚರಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸನಿಹದಲ್ಲಿದ್ದಾರೆ.
ಹೌದು, ನಟಿ ಸಮಂತಾ ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಅವರಿಂದು ಹಂಚಿಕೊಂಡಿರುವ ಇನ್ಸ್ಟಾ ಸ್ಟೋರಿ ಅಭಿಮಾನಿಗಳ ಗಮನ ಸೆಳೆದಿದೆ. ಚಿತ್ರಮಂದಿರದಲ್ಲಿ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಓಪನ್ಹೈಮರ್ (Oppenheimer) ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಆ ಫೋಟೋ ಶೇರ್ ಮಾಡಿರುವ ಅವರು, "8.45 am ಶೋ (ಹಾರ್ಟ್ ಎಮೋಜಿಯೊಂದಿಗೆ), ಗುಡ್ ಲೈಫ್ (ಸ್ಮೈಲ್ ಎಮೋಜಿ) #oppenheimer" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಈವರೆಗೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ನಟಿ ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿದ್ದಾರೆ. ಮಯೋಸಿಟಿಸ್ ಕಾಯಿಲೆ ವಿರುದ್ಧ ಹೋರಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಹಿನ್ನೆಲೆ ತಾವು ಒಪ್ಪಿಕೊಂಡ ಪ್ರಾಜೆಕ್ಟ್ಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಆರೋಗ್ಯ ಸರಿಯಾದ ಬಳಿಕವಷ್ಟೇ ಮುಂದಿನ ಸಿನಿಮಾಗಳತ್ತ ಗಮನ ಹರಿಸಲಿದ್ದಾರೆ. ಸದ್ಯಕ್ಕೆ ಯಾವುದೇ ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ತಮ್ಮ ಆರು ತಿಂಗಳ ಬ್ರೇಕ್ ಅವಧಿಯಲ್ಲಿ ಸಮಂತಾ ಆರೋಗ್ಯ ಚೇತರಿಕೆಗೆ ಕ್ರಮ ಕೈಗೊಳ್ಳಲಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಕೂಡ ಹೇಳಲಾಗಿದೆ.