ಸ್ಯಾಂಡಲ್ವುಡ್ನಲ್ಲಿ ಬಹು ಬೇಡಿಕೆ ಇರುವ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಒಬ್ಬರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಅದಿತಿ ಪ್ರಭುದೇವ ಅಭಿನಯದ ಬಹು ನಿರೀಕ್ಷಿತ ತೋತಾಪುರಿ ಸಿನಿಮಾ ನಿನ್ನೆಯಷ್ಟೇ ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನವರಸ ನಾಯಕ ಜಗ್ಗೇಶ್ ಜೋಡಿಯಾಗಿ ಅಭಿನಯಿಸಿರುವ ಅದಿತಿ ಪ್ರಭುದೇವ ತೋತಾಪುರಿ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಿದ್ಲಿಂಗು, ನೀರ್ ದೋಸೆ ಹಾಗು ಪೆಟ್ರೋಮ್ಯಾಕ್ಸ್ ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ವಿಜಯ್ ಪ್ರಸಾದ್ ಕಾಮಿಡಿ ಜೊತೆಗೆ ಜಾತಿ, ಧರ್ಮದ ನಡುವಿನ ಸಾಮರಸ್ಯದ ಬಗ್ಗೆ ಈ ಸಿನಿಮಾ ಮೂಲಕ ಹೇಳಿದ್ದಾರೆ.
ತೋತಾಪುರಿ ಮಾವಿನ ಹಣ್ಣಿನ ವ್ಯಾಪಾರ ನಡೆಸುವ ಮುಸ್ಲಿಂ ಕುಟುಂಬದಲ್ಲಿ ಒಬ್ಬರಾಗಿರುವ ಶಕೀಲಾ ಬಾನು ಪಾತ್ರ ನಿರ್ವಹಿಸಿದ್ದೇನೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಒಂದು ಡಿಫ್ರೆಂಟ್ ರೋಲ್ ನನಗೆ ಸಿಕ್ಕಿದ್ದು, ಈ ಪಾತ್ರ ತುಂಬಾನೆ ಖುಷಿ ಕೊಟ್ಟಿದೆ ಎಂದು ಅದಿತಿ ಪ್ರಭುದೇವ ತಿಳಿಸಿದ್ದಾರೆ.
ನನ್ನ ಪಾತ್ರ ಅಲ್ಲದೇ ಈ ಚಿತ್ರದಲ್ಲಿ ಬರುವ ಒಂದೊಂದು ಪಾತ್ರಗಳು ವಿಶಿಷ್ಟವಾಗಿದೆ. ಜಗ್ಗೇಶ್ ಸರ್ ಜೊತೆ ಸ್ಕ್ರೀನ್ ಹಂಚಿಕೊಳ್ಳೋದು ಖುಷಿಯ ವಿಚಾರ. ಇನ್ನು ವಿಜಯ್ ಪ್ರಸಾದ್ ಚೇಷ್ಟೇ ಇರುವ ಮುಗ್ಧ ಮನಸ್ಸಿನ ನಿರ್ದೇಶಕ. ಜೀವನದ ಕಷ್ಟ ಸುಖಗಳ ಬಗ್ಗೆ ತಿಳಿದುಕೊಂಡಿರುವ ನಿರ್ದೇಶಕ ಅವರು ಎಂದರು.
ಈ ಚಿತ್ರದಲ್ಲಿ ಬರುವ ವೀಣಾ ಸುಂದರಮ್, ಸುಮನ್ ರಂಗನಾಥ್ ಅಂತಂಹ ದೊಡ್ಡ ಆರ್ಟಿಸ್ಟ್ ಜೊತೆ ಅಭಿನಯಿಸುವ ಮೂಲಕ ನನಗೆ ಕಲಿಯಲು ಅವಕಾಶ ಸಿಕ್ಕಿತು. ಇನ್ನು ಪತ್ರಿದಿನ ಶೂಟಿಂಗ್ ವೇಳೆ ನೂರಕ್ಕೂ ಹೆಚ್ಚು ಸಹ ಕಲಾವಿದರು ಇರುತ್ತಿದ್ದರು. ಜೊತೆಗೆ ಶೂಟಿಂಗ್ ಸ್ಪಾಟ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗುತ್ತಿತ್ತು. ಈ ಚಿತ್ರದಲ್ಲಿ ಜಗ್ಗೇಶ್ ಸರ್ ಜೊತೆಗೆ ನಿರ್ಮಾಪಕ ಸುರೇಶ್ ಸರ್ ಅತಂಹ ದೊಡ್ಡ ನಿರ್ಮಾಪಕರು ಸಿಗೋದು ಕಷ್ಟ ಅಂದರು ಅದಿತಿ.
ಪ್ರತಿಯೊಂದು ಧರ್ಮಕ್ಕೆ ಅವರದ್ದೇ ಆದ ಸಂಪ್ರದಾಯ ಇರುತ್ತದೆ. ನಮ್ಮಲ್ಲಿರುವ ವೇಷ ಭೂಷಣಗಳನ್ನು ತೆಗೆದರೆ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಈ ಸಿನಿಮಾದಲ್ಲಿ ನಗಿಸುತ್ತಾ ಹೇಳಲಾಗಿದೆ ಅಂತಾ ತಿಳಿಸಿದರು.
ಇದನ್ನೂ ಓದಿ:ವಾರದ ಕಥೆ ಕಿಚ್ಚನ ಜೊತೆ.. ಮೊದಲ ವಾರ ಎಲಿಮಿನೇಟ್ ಆಗೋದ್ಯಾರು?
ಜಗ್ಗೇಶ್, ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರಮ್, ಹೇಮದತ್ ಹೀಗೆ ದೊಡ್ಡ ತಾರಬಳಗವಿರುವ ತೋತಾಪುರಿ ಸಿನಿಮಾ ಒಂದು ಗಲಭೆ ಇಲ್ಲದ ಪುಟ್ಟ ಪ್ರೇಮಕಥೆ. ಜೊತೆಗೆ ಇದು ಭಾವೈಕ್ಯತೆ ಸಾರುವ ಸಿನಿಮಾವಾಗಿದೆ. ಗೋವಿಂದಾಯ ನಮಃ ಹಾಗೂ ಶಿವಲಿಂಗ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ.ಎ ಸುರೇಶ್ ಒಳ್ಳೆ ಕಥೆ ಇರುವ ಸಿನಿಮಾವನ್ನ ನಿರ್ಮಾಣ ಮಾಡಿರುವ ಖುಷಿಯನ್ನ ಹೊಂದಿದ್ದಾರೆ.
ಈ ಸಿನಿಮಾ ಶುಕ್ರವಾರ ಭರ್ಜರಿಯಾಗಿ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಸದ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಷ್ಟರ ಮಟ್ಟಿಗೆ ಯಶಸ್ವಿ ಆಗಲಿದೆ, ಎಷ್ಟು ಕಲೆಕ್ಷನ್ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.