ಸುದೀಪ್ ಸಿನಿಮಾ ಮೇಕಿಂಗ್ ವಿಡಿಯೋ ವೈರಲ್ ಅಭಿನಯ ಚಕ್ರವರ್ತಿಯ ತೆರೆ ಮೇಲಿನ ದರ್ಶನಕ್ಕಾಗಿ ಕನ್ನಡಿಗರು ಕಾತರರಾಗಿದ್ದಾರೆ. 'ವಿಕ್ರಾಂತ್ ರೋಣ' ಸಿನಿಮಾ ಬಳಿಕ ಕಿಚ್ಚ ಸುದೀಪ್ ಅಭಿನಯದ ಯಾವುದೇ ಹೊಸ ಸಿನಿಮಾ ಬಿಡುಗಡೆ ಆಗಿಲ್ಲ. ಇತ್ತೀಚೆಗೆ ಬಹುಬೇಡಿಕೆ ನಟನ ಹೊಸ ಚಿತ್ರಗಳು ಘೋಷಣೆ ಆಗಿದ್ದು, ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಅಪಾರ ಸಂಖ್ಯೆಯ ಅಭಿಮಾನಿಗಳು ಕಿಚ್ಚನ ಮುಂದಿನ ಚಿತ್ರಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಭಿನಯ ಚಕ್ರವರ್ತಿ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋ ಜೊತೆ ಹೆಸರಿಡಿದ ಮೂರು ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಬಹು ಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ ಮ್ಯಾಕ್ಸ್ ಸಿನಿಮಾದ (ಕಿಚ್ಚ 46) ಶೂಟಿಂಗ್ನಲ್ಲಿ ಕಿಚ್ಚ ಭಾಗಿ ಆಗಿದ್ದಾರೆ. ಇದರ ಜೊತೆಗೆ ಕಿಚ್ಚ ಹೆಸರಿಡದ 47ನೇ ಸಿನಿಮಾವನ್ನೂ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ಮಾತಿಗೆ ಪೂರಕವಾಗಿ ಇತ್ತೀಚೆಗಷ್ಟೇ ಕಿಚ್ಚ 47 ಚಿತ್ರದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಖತ್ ಸೌಂಡ್ ಮಾಡಿತ್ತು. ಕಿಚ್ಚ ಸುದೀಪ್ ಅವರನ್ನು ಹೊಸ ಅವತಾರದಲ್ಲಿ ಕಂಡ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದರು. ಜೊತೆಗೆ ಇದು ಐತಿಹಾಸಿಕ ಸಿನಿಮಾನಾ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಕೂಡ ಆಗಿತ್ತು. ಇದರ ಬೆನ್ನಲ್ಲೇ ಕಿಚ್ಚ ರಾಜನ ಅವತಾರದಲ್ಲಿರುವ ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಟ ಸುದೀಪ್ ಅವರು 'ಕಿಚ್ಚ 47' ಸಿನಿಮಾದ ಅಪ್‌ಡೇಟ್ಸ್ ಕೊಡ್ತಾರೆ ಅಂತಾ ಹೇಳಲಾಗಿತ್ತು. ಇದೀಗ ವೈರಲ್ ಆಗಿರುವ ಮೇಕಿಂಗ್ ವಿಡಿಯೋ ಹಾಗೂ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಇನ್ನೂ ಮೇಕಿಂಗ್ ವಿಡಿಯೋದಲ್ಲಿ ಸುದೀಪ್ ಐತಿಹಾಸಿಕ ಸಿನಿಮಾದ ನಾಯಕನ ರೀತಿ ಕಾಣಿಸಿಕೊಂಡಿದ್ದಾರೆ. ತಮ್ಮ ಕ್ಯಾರವಾನ್‌ನಿಂದ ಬರುವ ನಟ ಸುದೀಪ್ ಲುಕ್ ಮಾತ್ರ ಸಖತ್ತಾಗಿದೆ. ಜೊತೆಗೆ, ಕಣ್ಣಿನ ಕೆಳಭಾಗದಲ್ಲಿ, ಹಣೆಗೆ ಕೆಂಪು ತಿಲಕವಿಟ್ಟ ಅವರ ನೋಟ ಯುದ್ಧ ಮಾಡಲು ಹೊರಟ ಯೋಧ, ರಾಜನ ರೀತಿ ಕಾಣುತ್ತಿದೆ. ಜೊತೆಗೆ ವಿಡಿಯೋದಲ್ಲಿ ಕುದುರೆ ಸವಾರಿ ದೃಶ್ಯದ ಚಿತ್ರೀಕರಣ ನಡೆಯುತ್ತಿರುವುದು ಗೊತ್ತಾಗುತ್ತದೆ.
ಇದನ್ನೂ ಓದಿ:ರಾಘವ್ ಚಡ್ಡಾ ಜನ್ಮದಿನ: ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡ ಪತ್ನಿ ಪರಿಣಿತಿ ಚೋಪ್ರಾ
ಕಿಚ್ಚ 47 ಚಿತ್ರವನ್ನು ತಮಿಳಿನ ಚೇರನ್ (Cheran) ನಿರ್ದೇಶನ ಮಾಡುತ್ತಿದ್ದಾರಾ? ಎಂಬ ಅನುಮಾನ ಶುರುವಾಗಿದೆ. ಇನ್ನು ಈ ಮೇಕಿಂಗ್ ವಿಡಿಯೋದಲ್ಲಿ ಗಮನ ಸೆಳೆಯುತ್ತಿರುವುದು ಡಮ್ಮಿ ಕುದುರೆ. ಹೌದು, ಕಿಚ್ಚ ಸುದೀಪ್ ಈ ವಿಡಿಯೋದಲ್ಲಿ ಡಮ್ಮಿ ಕುದುರೆ ಮೇಲೇರಿ ಸವಾರಿ ಮಾಡುತ್ತಿದ್ದಾರೆ. ಗ್ರೀನ್ ಬ್ಯಾಗ್ರೌಂಡ್ನಲ್ಲಿ ಶೂಟ್ ಮಾಡುತ್ತಿರುವ ಕಾರಣ ಡಮ್ಮಿ ಕುದುರೆ ಬಳಲಾಗಿದೆ. ಈ ಮೇಕಿಂಗ್ ಶೈಲಿ ನೋಡುತ್ತಿದ್ದರೆ ಇದು ಸಿನಿಮಾನಾ? ಅಥವಾ ಜಾಹೀರಾತು ಚಿತ್ರೀಕರಣವೇ? ಎಂಬ ಅನುಮಾನ ಕೂಡ ಮೂಡಿದೆ. ಇದೆಕ್ಕೆಲ್ಲ ಉತ್ತರ ನಟ ಸುದೀಪ್ ಕಡೆಯಿಂದಲೇ ಸಿಗಬೇಕು. ಸದ್ಯ ರಾಜನ ಅವತಾರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರ ಈ ಮೇಕಿಂಗ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ:ಧನತ್ರಯೋದಶಿ ಆಚರಿಸಿದ ಪಟೌಡಿ ಕುಟುಂಬ: ಸಾರಾ ಅಲಿ ಖಾನ್ ಆಕರ್ಷಕ ಫೋಟೋಗಳಿಲ್ಲಿವೆ