'ವೇದ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಎ ಹರ್ಷ ಕಾಂಬಿನೇಷನ್ನಲ್ಲಿ ಮೂಡಿಬಂದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಕಳೆದ ಶುಕ್ರವಾರ ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ತೆರೆ ಕಂಡು ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೊಸ ಅವತಾರದಲ್ಲಿ ಶಿವಣ್ಣನನ್ನು ಬೆಳ್ಳಿ ತೆರೆಮೇಲೆ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಮೂರು ಭಾಷೆಗಳಲ್ಲಿ ಬಿಡುಗಡೆ ಆಗಿರುವ ವೇದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಗಾಂಧಿನಗರದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಮೂರು ದಿನಗಳಲ್ಲಿ ವೇದ ಭರ್ಜರಿ ಕಲೆಕ್ಷನ್: ಹೌದು, ಕರ್ನಾಟಕದಲ್ಲೇ 350ಕ್ಕೂ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿರುವ ಸಿನಿಮಾ ವರ್ಷದ ಕೊನೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ಘೋಷಿಸದೇ ಇದ್ದರೂ, ಈ ಸಿನಿಮಾದ ವಿತರಕರಾದ ಮಂಜುನಾಥ್ ಮೂರು ದಿನದ ಕಲೆಕ್ಷನ್ ಬಗ್ಗೆ ಡೀಟೆಲ್ಸ್ ನೀಡಿದ್ದಾರೆ.
ಮೊದಲ ದಿನ 5.80 ಕೋಟಿ ರೂಪಾಯಿ ಸಂಗ್ರಹಿಸಿದೆ. ಎರಡನೇ ದಿನ 6.40 ಕೋಟಿ, ಮೂರನೇ ದಿನ 7.60 ಕೋಟಿ ರೂಪಾಯಿ ಸೇರಿ ಒಟ್ಟು 19 ಕೋಟಿ 80 ಲಕ್ಷ ರೂಪಾಯಿಯನ್ನು ಸಿನಿಮಾ ಬಾಚಿಕೊಂಡಿದೆ. ಈ ವಾರ ಇಯರ್ ಎಂಡ್ ಇರುವುದರಿಂದ ಅದು ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ. ವೀಕೆಂಡ್‌ನಲ್ಲಿ ವೇದ ಒಟ್ಟಾರೆ 25 ರಿಂದ 30 ಕೋಟಿ ರೂ ಕೊಳ್ಳೆ ಹೊಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವೇದ ವಿಮರ್ಶೆ:ವೇದ ಚಿತ್ರ ವೀಕ್ಷಿಸಿದ ಕನ್ನಡ ಸಿನಿಮಾಪ್ರಿಯರು ಶಿವಣ್ಣನ ಕಣ್ಣಿನ ನೋಟಕ್ಕೆ ಫಿದಾ ಆಗಿದ್ದು, ಹೆಣ್ಣು ಮಕ್ಕಳ ಬಗೆಗಿನ ಸಂದೇಶಕ್ಕೆ ಬೋಲ್ಡ್ ಆಗಿದ್ದಾರೆ. ಸ್ಟಾರ್ ನಟರು ಅದೇ ಹಳೇ ಮಸಾಲಾ ಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿ ಈ ರೀತಿಯ ಪ್ರಯತ್ನಗಳಿಗೆ ಕೈ ಹಾಕಬೇಕು ಅನ್ನೋದು ಪ್ರೇಕ್ಷಕರ ಅಂಬೋಣ.
ವೇದ ಕಥೆ ಏನು?: ಮಹಿಳೆಯರ ಮೇಲಿನ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆಯೇ 'ವೇದ'. ಈಗಾಗಲೇ ಈ ರೀತಿಯ ಕಥಾಹಂದರವಿರುವ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ನಿರ್ದೇಶಕ ಎ ಹರ್ಷ ಈ ಕಥೆಯನ್ನು 1960 ಹಾಗು 1980ರ ಕಾಲಘಟ್ಟಕ್ಕೆ ತಕ್ಕಂತೆ ಹೆಣೆದಿರೋದು ವಿಶೇಷವಾಗಿದೆ. ಮಹಿಳೆಯರು ಅನ್ಯಾಯ ಆದ ಕ್ಷಣವೇ ಅದರ ವಿರುದ್ಧ ಸಿಡಿದೇಳಬೇಕು ಎಂಬುದೇ ವೇದ ಸಮಾಜಕ್ಕೆ ಕೊಡುವ ಸಂದೇಶ.