ಕನ್ನಡ ಚಿತ್ರರಂಗದ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಶ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಭಿಷೇಕ್ ಅಂಬರೀಶ್ ಅವರು ಮದುವೆಯಾಗ್ತಿರೋದು ನಿಜಾನಾ? ಯಾರ ಜತೆ ಸಪ್ತಪದಿ ತುಳಿಯಲಿದ್ದಾರೆ ಅನ್ನೋದು ಕನ್ನಡ ಚಿತ್ರರಂಗದಲ್ಲಿ, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಈ ವಿಚಾರವಾಗಿ ಅಭಿಷೇಕ್ ಅಂಬರೀಶ್ ಆಪ್ತವಲಯದಲ್ಲಿ ವಿಚಾರಿಸಿದಾಗ, ಮನೆಯಲ್ಲಿ ಅಭಿಷೇಕ್ ಮದುವೆ ವಿಚಾರ ಮಾತುಕತೆ ಮಾಡಲಾಗಿದೆ ಅಂತಾ ಸುದ್ದಿ ಸಿಕ್ಕಿದೆ. ಡಿಸೆಂಬರ್ 11ರಂದು ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ನಡೆಯಲಿದ್ದು, ಕೆಲ ಸಿದ್ಧತೆಗಳು ಆಗಿವೆ. ಉಳಿದ ತಯಾರಿ ಕೂಡ ನಡೆಯುತ್ತಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಇನ್ನು, ಮೂಲಗಳ ಪ್ರಕಾರ, ಅಭಿಷೇಕ್ ಕೈ ಹಿಡಿಯುತ್ತಿರುವ ಹುಡುಗಿ ಖ್ಯಾತ ಮಾಡೆಲ್. ಆದರೆ ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಕುಟುಂಬದ ಸದಸ್ಯರು ಅಧಿಕೃತವಾಗಿ ಘೋಷಿಸಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಇಶಾನ್ ನಟನೆಯ 'ರೇಮೊ' ಚಿತ್ರಕ್ಕೆ ಸಿಕ್ತು ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದ
ಅಂಬರೀಶ್ ಬದುಕಿದ್ದಾಗ ಅಮರ್ ಸಿನಿಮಾ ಮೂಲಕ ಅಭಿಷೇಕ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಹೇಳುವಷ್ಟು ಪಾತ್ರವಾಗದಿದ್ದರೂ, ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾ ಬಳಿಕ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆ ಹಂತದಲ್ಲಿ ಇರಬೇಕಾದ್ರೆ ಅಭಿಷೇಕ್ ಅಂಬರೀಶ್ ಮದುವೆ ವಿಷಯ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿದೆ. ಆದರೆ ಅಭಿಷೇಕ್ ಮಾತ್ರ ಈ ವಿಚಾರವಾಗಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಅಷ್ಟಕ್ಕೂ ಅಭಿಷೇಕ್ ಕೈ ಹಿಡಿಯಲಿರುವ ಮಾಡೆಲ್ ಯಾರು ಎಂಬುದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.