ಮಂಡ್ಯ: 'ರೆಬಲ್ ಸ್ಟಾರ್' ಖ್ಯಾತಿಯ ಹಿರಿಯ ನಟ ದಿ. ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಮದುವೆಯ ಬೀಗರ ಔತಣಕೂಟವನ್ನು ಇಂದು ಸಕ್ಕರೆನಾಡು ಮಂಡ್ಯದಲ್ಲಿ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ 15 ಎಕರೆ ಪ್ರದೇಶದಲ್ಲಿ ಬೀಗರೂಟವನ್ನು ಆಯೋಜಿಸಲಾಗಿತ್ತು. ಸುಮಾರು 50 ಸಾವಿರ ಮಂದಿಗೆ ಬೊಂಬಾಟ್ ಬಾಡೂಟ ತಯಾರಿಸಲಾಗಿತ್ತು.
ಸುಮಲತಾ ಅಂಬರೀಶ್ ಕುಟುಂಬದ ಅಭಿಮಾನಿಗಳಿಗೆ ಊಟಕ್ಕೆಂದೇ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ವಿಶಾಲವಾದ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿಸಿ ಒಮ್ಮೆಲೇ 4,500 ಮಂದಿ ಕುಳಿತುಕೊಳ್ಳುವಂತಹ ಆಸನದ ವ್ಯವಸ್ಥೆ ಮಾಡಲಾಗಿತ್ತು. ಇಂದು ಮಧ್ಯಾಹ್ನ 12.30 ರಿಂದಲೇ ಔತಣಕೂಟ ಪ್ರಾರಂಭವಾಗಿತ್ತು.
ಊಟದ ಮೆನು ಹೀಗಿತ್ತು!: ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಸಲಾಗಿದ್ದು, ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದ 900 ಮಂದಿಯಿಂದ ಅಡುಗೆ ತಯಾರಿಗಳು ನಡೆದಿದೆ. 7 ಟನ್ ಮಟನ್ ಮತ್ತು 8 ಟನ್ ಚಿಕನ್ ಬಳಸಿ ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ರಾಗಿ ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋಳಿ ಸಾಂಬಾರ್, ಕಬಾಬ್, ಮೊಟ್ಟೆ, ತಿಳಿ ಸಾಂಬಾರ್, ಬಾದುಶಾ, ಪಾಯಸ, ಬೀಡಾ, ಐಸ್ಕ್ರೀಂ, ಬಾಳೆಹಣ್ಣು ಸೇರಿದಂತೆ ಭರ್ಜರಿ ಭೋಜನವಿತ್ತು.
ಬೀಗರೂಟದಲ್ಲಿ ಸಾವಿರಾರು ಮಂದಿ ಭಾಗಿ:ಬೀಗರ ಔತಣಕೂಟದಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಭರ್ಜರಿ ಬಾಡೂಟ ಸವಿದರು. ಜನ ಜಂಗುಳಿ ಹೆಚ್ಚಾಗಿ ಮೈಸೂರು- ಬೆಂಗಳೂರು ಹೆದ್ದಾರಿಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆಯಲ್ಲಿ ಜನಸಾಗರವೇ ತುಂಬಿತ್ತು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.