ಬೆಂಗಳೂರು:ಕನ್ನಡದ ಜೊತೆಗೆ ಪರಭಾಷೆಗಳ ಸಿಲ್ವರ್ ಸ್ಕ್ರೀನ್ ಮೇಲೆಯೂ ವಿಜೃಂಭಿಸುತ್ತಿರುವ ನಟ ಎಂದರೆ ಧನಂಜಯ್. ಸದ್ಯ ಕನ್ನಡಿಗರ ನೆಚ್ಚಿನ 'ಡಾಲಿ'ಯಾಗಿರೋ ಧನಂಜಯ್, ಕಳೆದ ನಾಲ್ಕು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಲ್ಲ. ಆದರೆ ಈ ವರ್ಷ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ನಡುವೆ ಉತ್ತರಕಾಂಡ ಚಿತ್ರತಂಡ ಸ್ಪೆಷಲ್ ಉಡುಗೊರೆ ನೀಡಿದೆ.
ಉತ್ತರಕಾಂಡ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಟೀಸರ್ನಲ್ಲಿ ಧನಂಜಯ್ ಗಬ್ರು ಸತ್ಯನಾಗಿ ಮಿಂಚಿದ್ದಾರೆ. ಉತ್ತರ ಕರ್ನಾಟಕದ ಉಡಾಳ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ರಿವೀಲ್ ಆಗಿರುವ ಟೀಸರ್ನಲ್ಲಿ ಗಬ್ರು ಸತ್ಯನ ಲುಕ್ನ ಪರಿಚಯದ ಜೊತೆಗೆ ವ್ಯಕ್ತಿತ್ವದ ಝಲಕ್ ಅನ್ನು ನಿರ್ದೇಶಕ ರೋಹಿತ್ ಪದಕಿ ತೋರಿಸಿದ್ದಾರೆ. ಟೀಸರ್ನ ಆರಂಭದಲ್ಲಿಯೇ ಧನಂಜಯ್ ಅಲಿಯಾಸ್ ಗಬ್ರು ಸತ್ಯ ಪೊಲೀಸ್ ಸ್ಟೇಷನ್ನಲ್ಲಿ ಹೂವಿನ ಬಣ್ಣದ ಚಡ್ಡಿಯಲ್ಲಿ ಕೂತಿರುತ್ತಾನೆ. ಪೊಲೀಸ್ ಅಧಿಕಾರಿಯೊಬ್ಬರು ಗಬ್ರುಗೆ ಕೆಟ್ಟದಾಗಿ ಬೈಯ್ಯುತ್ತಾ, ವ್ಯಂಗ್ಯ ಮಾಡುತ್ತಾ ಇನ್ನೊಮ್ಮೆ ಹೆಸರು ಕಿವಿಗೆ ಬಿದ್ದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ ಗಬ್ರು ಸತ್ಯ ಮಾತ್ರ ತೀರ ನಾಟಕೀಯವಾಗಿ ಅಮಾಯಕನಂತೆ ನಟಿಸುತ್ತಾ ಹೊರಬರುತ್ತಾನೆ.
ಆದರೆ, ಹೊರಗೆ ಬೇರೆಯದ್ದೇ ಚಿತ್ರಣ ಇರುತ್ತದೆ. ಗಬ್ರು ಹುಟ್ಟುಹಬ್ಬಕ್ಕಾಗಿ ಗಾನಾ ಬಜಾನ ಆಯೋಜನೆಗೊಂಡಿರುತ್ತದೆ. ಗಬ್ರುನನ್ನು ಸ್ವಾಗತಿಸಲು ಯುವಕರ ಗುಂಪು ಸೇರಿರುತ್ತದೆ. ಠಾಣೆಯಿಂದ ಹೊರಗೆ ಬಂದ ಗಬ್ರು, ಸಿಹಿ ತಿಂಡಿಯ ಪ್ಯಾಕೇಟ್ ಹಿಡಿದು ಮತ್ತೆ ಠಾಣೆಯ ಒಳಹೋಗಿ ತನಗೆ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿಗೆ ಸಿಹಿ ತಿಂಡಿ ಕೊಟ್ಟು ಹೊರಬಂದು ಸ್ಟೈಲ್ ಆಗಿ ಬೈಕ್ ಏರಿ, ಪೊಲೀಸಪ್ಪನಿಂದಲೇ ಕದ್ದ ಸಿಗರೇಟು ಹೊತ್ತಿಸುತ್ತಾನಷ್ಟೇ. ಇದೇ ವೇಳೆ ಗಬ್ರು ಇಟ್ಟು ಬಂದ ಸ್ಪೋಟಕ ತುಂಬಿದ ಸಿಹಿ ತಿನಿಸಿನ ಪ್ಯಾಕೆಟ್ ಬ್ಲಾಸ್ಟ್ ಆಗುತ್ತೆ. ಕರ್ನಾಟಕದ ಮನಿ ಮಗ ಯಾರ್ರಲೇ ಎಂದು ಖಡಕ್ ಡೈಲಾಗ್ ಹೊಡೆಯುತ್ತಾನೆ ಗಬ್ರು.