ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ 'ಚಾರ್ಲಿ 777' ಸಿನಿಮಾಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಇಂದು ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಕಿರಣ್ ರಾಜ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಕನ್ನಡದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆ 'ಚಾರ್ಲಿ 777' ಮುಡಿಗೇರಿದೆ.
ದೆಹಲಿಯಲ್ಲಿ ಇಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗಾಗಲೇ ಘೋಷಿತ ವಿಜೇತರಿಗೆ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಚಿತ್ರರಂಗದ ಅನೇಕ ಕಲಾವಿದರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸ್ಯಾಂಡಲ್ವುಡ್ನಿಂದ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ತಮ್ಮ 'ಚಾರ್ಲಿ' ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು. ಪ್ರಾಣಿ ಪ್ರಿಯರನ್ನು ವಿಶೇಷವಾಗಿ ಆಕರ್ಷಿಸಿದ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ.
ಪರಂವಃ ಸ್ಟುಡಿಯೋ ಸಂತಸ:ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋ ಮೂಲಕ 'ಚಾರ್ಲಿ 777' ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಪರಂವಃ ಸ್ಟುಡಿಯೋ ಸಂತಸ ವ್ಯಕ್ತಪಡಿಸಿದೆ. ಎಕ್ಸ್ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡಿರುವ ಸಂಸ್ಥೆ, "ಎಂತಹ ಅದ್ಭುತ ಕ್ಷಣ. ನಮ್ಮ ಪ್ರೀತಿಯ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಅವರು ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ 69ನೇ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಂತೆ ನಮ್ಮ ಹೃದಯ ಹೆಮ್ಮೆಯಿಂದ ಉಬ್ಬುತ್ತದೆ" ಎಂದು ಬರೆದುಕೊಂಡಿದೆ.