ಹಾಸ್ಯದ ಮೂಲಕ ಕೋಟ್ಯಂತರ ಕನ್ನಡಿಗರನ್ನು ರಂಜಿಸಿರುವ ಕಾಮಿಡಿ ಸ್ಟಾರ್ ಶರಣ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. 1996ರಲ್ಲಿ 'ಪ್ರೇಮ ಪ್ರೇಮ ಪ್ರೇಮ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್ ಇಂದು ಚಂದನವನದ ಕಾಮಿಡಿ ಸ್ಟಾರ್ ನಟರಾಗಿ ಉತ್ತುಂಗದಲ್ಲಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡು ಚಿತ್ರ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸುತ್ತಿದ್ದ ಶರಣ್ ಈಗ ನಾಯಕ ನಟನಾಗಿ ಮಿಂಚುತ್ತಿದ್ದಾರೆ.
ಬ್ಲಾಕ್ ಬಸ್ಟರ್ 'ಅಧ್ಯಕ್ಷ' ಶರಣ್ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ಚಿತ್ರ. ಶರಣ್ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಕಲಾವಿದನಾಗಿ, ಕಾಮಿಡಿ ನಟನಾಗಿ ಕಾಣಿಸಿಕೊಂಡಿದ್ದಾರೆ. 'ರ್‍ಯಾಂಬೋ' ಚಿತ್ರದಿಂದ ನಾಯಕನಾಗಿ ಮಿಂಚುತ್ತಿರುವ ಶರಣ್ಗೆ ಇಂದು 51ನೇ ಜನ್ಮದಿನ. ನಟ ಶರಣ್ 1972 ಫೆಬ್ರವರಿ 6ರಂದು ಜನಿಸಿದ್ದು, ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಇದು ನಾನು ಹುಟ್ಟಿ ಬೆಳೆದ ನಾಡು, ನನ್ನ ಚಿಕ್ಕ ವಯಸ್ಸನ್ನು ಕಳೆದ ಊರು ಇದು. ಹುಬ್ಬಳ್ಳಿ ನನಗೆ ಸ್ವರ್ಗಕ್ಕೆ ಸಮಾನ. ಹುಬ್ಬಳ್ಳಿ ಊಟ, ಇಲ್ಲಿನ ಮಾತನ್ನು ಕೇಳ್ತಿದ್ದರೆ ನನ್ನ ಮೈಯಲ್ಲ ರೋಮಾಂಚನವಾಗುತ್ತದೆ ಎಂದು ನಟ ಶರಣ್ ಅವರು ನಟನೆ ಗುರು ಶಿಷ್ಯರು ಚಿತ್ರದ ಟ್ರೈಲರ್ ಲಾಂಚ್ ವೇಳೆ ಗಂಡು ಮಟ್ಟಿನ ನಾಡು ಹುಬ್ಬಳ್ಳಿಯನ್ನು ಹಾಡಿ ಹೊಗಳಿದ್ದರು.
ಇನ್ನು, ಸ್ಯಾಂಡಲ್ವುಡ್ ಅಧ್ಯಕ್ಷನಾಗಿ ಸಿನಿಪ್ರಿಯರ ಮನ ಗೆದ್ದಿರುವ ನಟ ಶರಣ್ ಅಭಿನಯದ ಛೂ ಮಂತರ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹಾಸ್ಯ ನಟನಾಗಿ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಯಶಸ್ಸು ಕಂಡಿರುವ ಶರಣ್ ಅವರು ಚಿತ್ರರಂಗದ ಪೈಸಾ ವಸೂಲ್ ಹೀರೋ ಅನ್ನೋದು ನಿರ್ಮಾಪಕರ ಅಭಿಪ್ರಾಯ. ಅವತಾರ ಪುರುಷ ಬಳಿಕ ಶರಣ್ ಛೂ ಮಂತರ್ ಅನ್ನುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಬಹುತೇಕ ಶೂಟಿಂಗ್ ಮುಗಿಸಿರುವ ಛೂ ಮಂತರ್ ಚಿತ್ರದ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.