ನವದೆಹಲಿ:ಕೇಂದ್ರ ಸರ್ಕಾರದ ಕುಮ್ಮಕ್ಕಿನ ಮೇಲೆ ಬಿಜೆಪಿಯೇತರ ಸರ್ಕಾರಗಳ ಸಚಿವರು ಹಾಗೂ ಶಾಸಕರುಗಳ ಆಪ್ತರನ್ನು ಗುರಿಯಾಗಿಸಿಕೊಂಡು ಉದ್ದೇಶ ಪೂರ್ವಕವಾಗಿ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ.
ರಾಷ್ಟ್ರಮಟ್ಟದಲ್ಲಿ ಈ ಆಪಾದನೆಯು ಪ್ರಬಲ ಧ್ವನಿಯಾಗುತ್ತಿದ್ದು, ಮೊದಲ ಹಂತದ ಮತದಾನಕ್ಕೆ ಎರಡೂ ದಿನಗಳಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ
ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮುಖ್ಯಸ್ಥ ಪಿ. ಸಿ ಮೂಡಿ ಹಾಗೂ ಆದಾಯ ತೆರಿಗೆ ಇಲಾಖೆ ಕಾರ್ಯದರ್ಶಿ ಎ.ಬಿ. ಪಾಂಡೆ ಅವರಿಗೆ ರಾಜಕೀಯ ನಾಯಕರ ಮೇಲೆ ದಾಳಿಯ ಕುರಿತು ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲ ವಿವರಣೆ ನೀಡಲು ಆಯೋಗದ ಕಚೇರಿಗೆ ಧಾವಿಸುವಂತೆ ಬುಲಾವ್ ಸಹ ನೀಡಿದೆ.
ಚುನಾವಣೆ ಉದ್ದೇಶಕ್ಕಾಗಿ ಕಪ್ಪುಹಣದ ಬಳಕೆಯಾಗುತ್ತಿದೆ ಎನ್ನುವ ಶಂಕೆ ಇದ್ದರೆ ಅಥವಾ ಪ್ರಕರಣಗಳ ಕುರಿತು ಮಾಹಿತಿ ದೊರೆತರೆ ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಯವರಿಗೆ ಮಾಹಿತಿ ರವಾನಿಸಿ ಹಾಗೂ ಅವರಿಂದ ಸಹಾಯ ಪಡೆದು ದಾಳಿ ನಡೆಸಬೇಕು ಎಂದು ಆಯೋಗ ನಿರ್ದೇಶನ ನೀಡಿದೆ.
ಚುನಾವಣೆ ಘೋಷಣೆಯಾದ ಬಳಿಕ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಐಟಿ ಇಲಾಖೆ ದಾಳಿ ನಡೆದಿದೆ. ಕರ್ನಾಟಕದ ಸಮ್ಮಿಶ್ರ ಸರ್ಕಾರದ ಜೆಡಿಎಸ್ ಸಚಿವರು ಅವರು ಆಪ್ತರಿರುವ ಮೈಸೂರು, ಮಂಡ್ಯ ಹಾಗೂ ಹಾಸನದ ಮನೆ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿತ್ತು. ಇದರ ವಿರುದ್ಧ ಸರ್ಕಾರವೇ ಬೀದಿಗಿಳಿದು ಪ್ರತಿಭಟನೆ ನಡೆಸಿತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆಗಾಗಿ ಚುನಾವಣಾ ಆಯೋಗ ಸೂಚನೆ ನೀಡಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಇತರರ ನಿಕಟವರ್ತಿಗಳ ಮೇಲೆ ಐಟಿ ದಾಳಿ ನಡೆಸಿ ಸುಮಾರು ₹ 281 ಕೋಟಿ ನಗದು ವಶಕ್ಕೆ ಪಡೆದುಕೊಂಡಿದೆ. ಮಧ್ಯ ಪ್ರದೇಶ ಹಾಗೂ ದೆಹಲಿ ಮಾರ್ಗವಾಗಿ ಸಾಗಿಸುತ್ತಿದ್ದ ದಾಖಲೆ ರಹಿತ ₹ 14.6 ಕೋಟಿ ಹಾಗೂ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರೇ ವಾಸಿಸುವ ದೆಹಲಿಯ ಪ್ರತಿಷ್ಠಿತ ಪ್ರದೇಶದಲ್ಲಿ ₹ 20 ಕೋಟಿಯನ್ನು ಐಟಿ ಜಪ್ತಿ ಮಾಡಿಕೊಂಡಿದೆ.