ಗುಂಟೂರು(ಆಂಧ್ರಪ್ರದೇಶ):ಯೆಡ್ಲಪಾಡ ಮಂಡಲದ ಚಾಂಗಿಸ್ಖಾನ್ ಪೆಟಾದಲ್ಲಿ ವಿವಾಹಿತ ಯುವತಿಗೋಸ್ಕರ ಮೂರು ಕುಟುಂಬದಲ್ಲಿ ಬಿರುಗಾಳಿ ಎದ್ದಿದ್ದು,ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 21 ವರ್ಷದ ಮಹೇಶ್ವರಿ ಅದೇ ಗ್ರಾಮದ ಯೋಧ ಶಿವಶಂಕರ್ ಜೊತೆ ಕಳೆದ 11 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದಳು. ವಿವಾಹವಾದ ಬಳಿಕ ಶಿವಶಂಕರ್ ಕೆಲಸಕ್ಕೆ ಹೋಗುತ್ತಾನೆ. ಮಹೇಶ್ವರಿಗೆ ಈ ಮ್ಯಾರೇಜ್ ಇಷ್ಟವಿಲ್ಲದ ಕಾರಣ ತಾನು ಪ್ರೀತಿಸುತ್ತಿದ್ದ ಗೋಪಿ ಮನೆಗೆ ಹೋಗಿ ಉಳಿದುಕೊಳ್ಳುತ್ತಾಳೆ. ಗೋಪಿ ಪ್ರಕಾಶಂ ಜಿಲ್ಲೆಯಲ್ಲಿ ವಾಸವಾಗಿದ್ದನು. ಈ ವೇಳೆ ಮಹೇಶ್ವರಿ ಹಾಗೂ ಶಿವಶಂಕರ್ನ ಮನೆಯವರು ಅಲ್ಲಿಗೆ ತೆರಳಿ ಮರಳಿ ಬರುವಂತೆ ಬೇಡಿಕೊಳ್ಳುತ್ತಾರೆ. ಆದರೆ ಮಹೇಶ್ವರಿ ವಾಪಸ್ ಬರದೇ, ಗೋಪಿ ಮನೆಯಲ್ಲಿ ಉಳಿದುಕೊಂಡಿದ್ದಳು. ಇದರ ಬೆನ್ನಲ್ಲೇ ಶಿವಶಂಕರ್ ರಜಾದಿನಕ್ಕಾಗಿ ಮತ್ತೆ ವಾಪಸ್ ಊರಿಗೆ ಬಂದಿದ್ದಾನೆ. ಆತನಿಗೆ ಮಾಹಿತಿ ಗೊತ್ತಾಗಿದ್ದು, ಮನೆಗೆ ಬರುವಂತೆ ಮಹೇಶ್ವರಿ ಬಳಿ ಮನವಿ ಮಾಡಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ.
ಆತ್ಮಹತ್ಯೆಗೆ ಶರಣಾಗಿರುವ ಮಹೇಶ್ವರಿ ಇದನ್ನೂ ಓದಿರಿ: ಬುದ್ಧಿವಾದ ಹೇಳಿದ ತಮ್ಮನನ್ನೇ ಕೊಚ್ಚಿ ಕೊಂದ ಅಣ್ಣ... ಎಸ್ಕೇಪ್ ಆಗಲು ಹೋಗಿ ಅಂದರ್
ಆತ್ಮಹತ್ಯೆಗೆ ಯತ್ನಿಸಿದ ಶಿವಶಂಕರ್:ಘಟನೆ ಬಗ್ಗೆ ಅಸಮಾಧಾನಗೊಂಡ ಯೋಧ ಶಿವಶಂಕರ್ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಕೆಲವರು ಆತನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ.
ನೇಣಿಗೆ ಶರಣಾದ ಮಹೇಶ್ವರಿ:ಗಂಡನ ಸ್ಥಿತಿ ಬಗ್ಗೆ ಗೊತ್ತಾಗುತ್ತಿದ್ದಂತೆ ಆತಂಕಗೊಂಡ ಮಹೇಶ್ವರಿ ತಾನೇ ತಪ್ಪಿತಸ್ಥಳೆಂದು ಭಾವಿಸಿದ್ದಾಳೆ. ಎಲ್ಲದ್ದಕ್ಕೂ ತಾನೇ ಹೊಣೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೋಪಿ ಮನೆಯ ಬಾತ್ರೂಂನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಗೋಪಿ ತಂದೆ ಆತ್ಮಹತ್ಯೆ:ನನ್ನ ಮಗ ವಿವಾಹಿತ ಮಹಿಳೆಯೋರ್ವಳನ್ನ ಮನೆಯಲ್ಲಿ ತಂದಿಟ್ಟುಕೊಂಡಿದ್ದು, ಇದು ನನ್ನ ಮಾರ್ಯಾದೆಗೆ ವಿರುದ್ಧವಾಗಿದೆ ಎಂದು ಗೋಪಿ ತಂದೆ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಶಿವಶಂಕರ್ ತಂದೆಗೆ ಹೃದಯಾಘಾತ:ಮಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಯುತ್ತಿದ್ದಂತೆ ಶಿವಶಂಕರ್ ತಂದೆಗೆ ಹೃದಯಾಘಾತವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಓರ್ವ ಯುವತಿಗೋಸ್ಕರ ಮೂರು ಕುಟುಂಬದಲ್ಲಿ ಸಮಸ್ಯೆ ಏರ್ಪಟ್ಟಿದೆ. ಈ ಎಲ್ಲ ಪ್ರಕರಣಗಳಿಗೂ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.