ಕುಷ್ಟಗಿ (ಕೊಪ್ಪಳ): ಕುರಿ ಸಾಕಾಣಿಕೆಗಾಗಿ ಕುಷ್ಟಗಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ರೈತ 3 ಲಕ್ಷ ಸಾಲದ ಚೆಕ್ ಡ್ರಾ ಮಾಡಿದ ಕೆಲವೇ ನಿಮಿಷಗಳಲ್ಲಿ ಚಾಲಕಿ ಕಳ್ಳರು ಹಣ ಎಗರಿಸಿದ ಪ್ರಕರಣದಲ್ಲಿ 6 ತಿಂಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
ತಮಿಳುನಾಡಿನ ಸೆಲ್ವಪುರಂ ಮೂಲದ ವಿಜಯ್, ಓ.ಜಿ.ಕುಪ್ಪಂ ಶ್ರೀನಿವಾಸಲು ವೆಂಕಟಸ್ವಾಮಿ, ನಾಗರಾಜ್, ಚಂದುಲು, ಬಾಲು,ತಿರುವಂಬೂರಿನ ಮಥನ್, ಶಿವಾ ಬಂಧಿತ ಆರೋಪಿಗಳು. ಬಂಧಿತರಿಂದ 1.5 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.
ಕುಷ್ಟಗಿ ಡಂಬರ್ ಓಣಿಯ ನಿವಾಸಿ ದೊಡ್ಡಬಸಯ್ಯ ಕಾಳಾಪೂರ ಮಠ ಕುಷ್ಟಗಿ ಪೀಕಾರ್ಡ ಬ್ಯಾಂಕಿನಲ್ಲಿ 3.06ಲಕ್ಷ ರೂ. ಸಾಲ ಮಾಡಿದ್ದರು. ಹಣವನ್ನು ರೈತ ದೊಡ್ಡಬಸಯ್ಯ ಹಾಗೂ ಪೀಕಾರ್ಡ ಬ್ಯಾಂಕ್ ಪರಿಚಾರಕ ಸಯ್ಯದ್ ಗೌಸ್ ಇಲ್ಲಿನ ಪ್ರಗತಿ ಕೃಷ್ಣ ಬ್ಯಾಂಕಿನಲ್ಲಿ ಚೆಕ್ ನಗದೀಕರಿಸಿ ಡ್ರಾ ಮಾಡಿದ್ದರು. 50ಸಾವಿರ ರೂ. ಸಯ್ಯದ್ ಗೌಸ್ ಜೇಬಿನಲ್ಲಿ, ಉಳಿದ 1.56 ಲಕ್ಷ ರೂ. ಸ್ಕೂಟಿ ಸೀಟ್ ಲಾಕ್‌ನಲ್ಲಿ ಇಟ್ಟು ಚಹಾ ಕುಡಿಯಲು ಹೋಗಿದ್ದರು. ನಂತರ ಬರುವಷ್ಟರಲ್ಲಿ ಸ್ಕೂಟಿ ಲಾಕ್‌ನಲ್ಲಿ ಇಟ್ಟಿದ್ದ ಹಣ ಕಳುವಾಗಿತ್ತು.