ಜೈಪುರ್: ರಾಜಸ್ಥಾನ ರಾಜಧಾನಿ ಜೈಪುರ್ನ ಚೌಮುನ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯವೊಂದರ ವಿದ್ಯಾರ್ಥಿನಿಯೊಬ್ಬರು ನಾಲ್ಕು ತಿಂಗಳ ಹಿಂದೆ ನಿಗೂಢವಾಗಿ ಮೃತಪಟ್ಟ ಘಟನೆಗೆ ಈಗ ಹೊಸ ತಿರುವು ಸಿಕ್ಕಿದೆ. ಸಹಪಾಠಿಗಳೇ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತಳ ಸಹೋದರಿಯು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಏಪ್ರಿಲ್ 19 ರಂದು ಎಂಜೆಎಫ್ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ ಸಿಕಾರ್‌ನ ಲಕ್ಷ್ಮಿ ರಾವತ್ ಕಾಲೇಜಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಚೌಮುನ್ ಪೊಲೀಸ್ ಅಧಿಕಾರಿ ಹೇಮರಾಜ್ ತಿಳಿಸಿದ್ದಾರೆ.
ಶುಕ್ರವಾರ ಆಕೆಯ ಸಹೋದರಿ ಸುಮನ್ ರಾವತ್, ಲಕ್ಷ್ಮಿಯೊಂದಿಗೆ ಓದುತ್ತಿದ್ದ 9 ಹುಡುಗಿಯರು, ಮೆಸ್ ಅಧಿಕಾರಿ ಮತ್ತು ಸಿಸಿಟಿವಿ ಕ್ಯಾಮೆರಾ ಆಪರೇಟರ್ ಸೇರಿದಂತೆ 19 ಜನ ಸೇರಿ ಅವಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ಕೆಲವರು ಕಾಲೇಜಿಗೆ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಕಾಲೇಜಿನಲ್ಲಿ ತನ್ನ ಸಹೋದರಿಯೊಂದಿಗೆ ಓದುತ್ತಿದ್ದ ಬಾಲಕಿಯರು ಮೊದಲು ದಿಂಬಿನ ಮೂಲಕ ಆಕೆಯ ಬಾಯಿಯನ್ನು ಒತ್ತಿ ಹಿಡಿದಿದ್ದಾರೆ ಮತ್ತು ನಂತರ ಇತರ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಚಾವಣಿಯಿಂದ ಕೆಳಗೆ ಎಸೆದು ಕೊಲೆ ಮಾಡಿದ್ದಾರೆ ಎಂದು ಸುಮನ್ ಆರೋಪಿಸಿದ್ದಾರೆ. ಶವವನ್ನು ಆಸ್ಪತ್ರೆಗೆ ಕೊಂಡೊಯ್ದ ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಮೃತಳು ಹಲವಾರು ದಿನಗಳಿಂದ ಆತಂಕದಲ್ಲಿದ್ದು, ಮನೆಗೆ ಬರಲು ಬಯಸಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಲೇಜಿನಲ್ಲಿ ಡ್ರಗ್ಸ್ ಸರಬರಾಜಾಗುತ್ತಿದ್ದು, ಅನೇಕ ಹುಡುಗರು ಮತ್ತು ಹುಡುಗಿಯರು ಅದನ್ನು ಸೇವಿಸಿ ದುರ್ವರ್ತನೆ ಮಾಡುತ್ತಾರೆ ಎಂದು ಲಕ್ಷ್ಮಿ ಕುಟುಂಬ ಸದಸ್ಯರಿಗೆ ಫೋನ್‌ನಲ್ಲಿ ತಿಳಿಸಿದ್ದಳು. ಲಕ್ಷ್ಮಿಗೆ ಈ ವಿಷಯ ತಿಳಿದಿತ್ತು ಮತ್ತು ಅಂದಿನಿಂದ ಅವಳನ್ನು ಕೊಲ್ಲುವ ಯೋಜನೆ ಪ್ರಾರಂಭವಾಯಿತು. ಏಪ್ರಿಲ್ 17 ರಂದು ಮನೆಗೆ ಕರೆ ಮಾಡಿದ ಆಕೆ ಬೇಸರಗೊಂಡಿದ್ದು, ಶೀಘ್ರದಲ್ಲೇ ಬರುವುದಾಗಿ ತಿಳಿಸಿದ್ದಳು ಎಂದು ಸುಮನ್ ಹೇಳಿದರು.
ಅದೇ ದಿನ ಊರಿಗೆ ಮರಳಲು ತಯಾರಿ ನಡೆಸುತ್ತಿದ್ದ ಆಕೆಯನ್ನು ಪ್ರಾಕ್ಟಿಕಲ್ಸ್ ಹೆಸರಿನಲ್ಲಿ ಏಪ್ರಿಲ್ 19ರವರೆಗೆ ತಡೆದು ನಿಲ್ಲಿಸಲಾಗಿತ್ತು. ಹೀಗಾಗಿ ಆಕೆ 19 ರಂದು ಬರುವುದಾಗಿ ತಿಳಿಸಿದ್ದಳು. ಆದರೆ 19 ರಂದು ಆಕೆಯ ಸಾವಿನ ಸುದ್ದಿ ಬಂತು ಎಂದು ಸುಮನ್ ಹೇಳಿದ್ದಾರೆ.
ಇದನ್ನು ಓದಿ:ಕಲ್ಕಾ ಸಾಯಿನಗರ ಎಕ್ಸ್‌ಪ್ರೆಸ್‌ನಲ್ಲಿ ಕೊರೊನಾ ಪಾಸಿಟಿವ್ ಮೃತದೇಹ ಪತ್ತೆ