ಗದಗ: ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೊಣ್ಣೂರ ಗ್ರಾಮದ ಯಲ್ಲವ್ವ ಚಂದಣ್ಣವರ (27), ಸ್ವಪ್ನಾ ಚಂದಣ್ಣವರ (2) ಮೃತ ದುರ್ದೈವಿಗಳು.
ಇಬ್ಬರು ಪುಟ್ಟ ಕಂದಮ್ಮಗಳಿಗೆ ವಿಷ ಉಣಿಸಿ, ತಾಯಿ ಆತ್ಮಹತ್ಯೆ: ಪುತ್ರನ ಸ್ಥಿತಿ ಗಂಭೀರ - ಗದಗ ಜಿಲ್ಲಾ ಸುದ್ದಿ
ಅನಾರೋಗ್ಯದಿಂದ ಬೇಸತ್ತ ತಾಯಿ, ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ತಾಯಿ ಹಾಗೂ 2 ವರ್ಷದ ಹೆಣ್ಣು ಮಗು ಮೃತಪಟ್ಟಿದ್ದು, 6 ವರ್ಷದ ಪುತ್ರನ ಸ್ಥಿತಿ ಗಂಭೀರವಾಗಿದೆ.

ಮೃತಳ ಹಿರಿಯ ಮಗ ಸಮರ್ಥ ಚಂದಣ್ಣವರ (6) ಸ್ಥಿತಿ ಗಂಭೀರವಾಗಿದ್ದು, ನರಗುಂದ ಬಾಬಾಸಾಹೇಬ್ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಲ್ಲವ್ವ ಅವರಿಗೆ 14 ವರ್ಷದವರಿದ್ದಾಗಿನಿಂದಲೇ ಎದೆ ನೋವು ಕಾಣಿಸಿಕೊಳ್ಳುತ್ತಿತ್ತು. ಇತ್ತೀಚೆಗೆ ಎದೆ ನೋವು ವಿಪರೀತವಾದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಹತ್ತಿಗೆ ಸಿಂಪಡಣೆ ಮಾಡುವ ಕ್ರಿಮಿನಾಶಕ ಸೇವಿಸಿದ್ದಾಳೆ. ಸಾಲದೆಂಬಂತೆ ತನ್ನಿಬ್ಬರು ಮಕ್ಕಳಾದ ಸ್ವಪ್ನಾ, ಸಮರ್ಥನಿಗೆ ವಿಷ ಉಣಿಸಿದ್ದಾಳೆ ಎನ್ನಲಾಗಿದೆ.
ಚಿಕಿತ್ಸೆಗೆ ದಾಖಲಾಗಿದ್ದ ಎರಡು ವರ್ಷದ ಮಗಳು ಸ್ವಪ್ನಾ ತನ್ನ ಹೆತ್ತಮ್ಮನ ಶವಸಂಸ್ಕಾರವಾದ ಅರ್ಧ ಗಂಟೆಯಲ್ಲೇ ಮೃತಪಟ್ಟಿದ್ದಾಳೆ. ಆರು ವರ್ಷದ ಸಮರ್ಥನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮೃತ ಯಲ್ವವ್ವನ ತಾಯಿ ನೀಲವ್ವ ಚುರ್ಚಪ್ಪ ಗುಡಿಸಲಮನಿ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಎಸ್‌ಐ ವಿ.ಜಿ.ಪವಾರ ತನಿಖೆ ಕೈಗೊಂಡಿದ್ದಾರೆ.