ಉದಯಪುರ (ರಾಜಸ್ಥಾನ): ನಿರ್ಜಲ ಏಕಾದಶಿ ಪ್ರಯುಕ್ತ ಜೋಳದ ಹಿಟ್ಟಿನಿಂದ ತಯಾರಿಸಿದ್ದ ಭಕ್ಷ್ಯವನ್ನು ಸವಿದಿದ್ದ 35ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದಿದೆ. ಅಸ್ವಸ್ಥರನ್ನು ತಡರಾತ್ರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಏಕಾದಶಿ ಎಂದು ಉಪವಾಸ ಮಾಡಿದವರು ಉಪವಾಸ ಮುಗಿದ ಬಳಿಕ ಜೋಳದ ಹಿಟ್ಟಿನಿಂದ ತಯಾರಿಸುವ ತಿನಿಸು ತಿನ್ನುವುದು ಅಲ್ಲಿನ ಜನರ ಸಂಪ್ರದಾಯವಾಗಿದೆ. ನಿನ್ನೆ ಸಂಜೆ ಉದಯಪುರ ನಗರದ ಹತಿಪೋಲ್, ಜಗದೀಶ್ ಚೌಕ್ ಸೇರಿದಂತೆ ಇತರ ಪ್ರದೇಶಗಳ ಜನರು ತಮ್ಮ ತಮ್ಮ ಮನೆಗಳಲ್ಲಿ ಭಕ್ಷ್ಯ ಸೇವಿಸುತ್ತಿದ್ದಂತೆಯೇ ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ತಲೆತಿರುಗುವಿಕೆ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಒಬ್ಬರಾದ ಮೇಲೊಬ್ಬರು ಮಹಾರಾಣ ಭೂಪಾಲ್ (ಎಂಬಿ) ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದು, ವೈದ್ಯರು ಕಂಗಾಲಾಗಿದ್ದಾರೆ.