ಭರತ್ಪುರ (ರಾಜಸ್ಥಾನ): ಭರತ್ಪುರ ಕ್ಷೇತ್ರದ ಬಿಜೆಪಿ ಸಂಸದೆ ರಂಜಿತಾ ಕೋಲಿ ಅವರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಪ್ರಜ್ಞಾಹೀನರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಧಾರ್ಸೋನಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಹೋಗುತ್ತಿದ್ದ ವೇಳೆ ಐದರಿಂದ ಆರು ಮಂದಿ ಬಂದು ಕಾರಿನ ಮೇಲೆ ಕಲ್ಲು ತೂರಿ ದಾಳಿ ನಡೆಸಿದ್ದಾರೆ. ನನಗೆ ಯಾರ ಮೇಲೂ ದ್ವೇಷವಿಲ್ಲ. ಹಲ್ಲೆ ಮಾಡಿದವರು ಅಪರಿಚಿತ ಜನರಾಗಿದ್ದು, ಅವರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ರಂಜಿತಾ ಕೋಲಿ ಹೇಳಿದ್ದಾರೆ.
ಬಿಜೆಪಿ ಸಂಸದೆ ಕಾರಿನ ಮೇಲೆ ದಾಳಿ ಈ ಬಗ್ಗೆ ರಂಜಿತಾ ಅವರ ಟ್ವಿಟರ್ ಖಾತೆಯಲ್ಲಿ ಭರತ್ಪುರ ಸಂಸದೆಯ ತಂಡ ಮಾಹಿತಿ ಹಂಚಿಕೊಂಡಿದ್ದು, ಭರತ್ಪುರ ಆರ್‌ಬಿಎಂ ಆಸ್ಪತ್ರೆಯ ಪರಿಶೀಲನೆ ಬಳಿಕ ಸಂಸದದೆ ಶ್ರೀಮತಿ ರಂಜಿತಾ ಕೋಲಿ ಜೀ ಆರೋಗ್ಯ ಕೇಂದ್ರಕ್ಕೆ ತೆರಳುವ ವೇಳೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬಂದು ಹಲ್ಲೆ ನಡೆಸಿದ್ದಾರೆ. ಈ ದಾಳಿ ಎಷ್ಟು ಭೀಕರವಾಗಿತ್ತೆಂದರೆ ಮೇಡಂ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಲಾಯಿತಾದರೂ ಪೊಲೀಸರು ಘಟನಾ ಸ್ಥಳವನ್ನು ತಲುಪಲು 45 ನಿಮಿಷಗಳನ್ನು ತೆಗೆದುಕೊಂಡರು. ಮತ್ತೊಂದೆಡೆ ಜಿಲ್ಲಾಧಿಕಾರಿಯೂ ಫೋನ್ ಎತ್ತಲಿಲ್ಲ ಎಂದು ಹೇಳಿದ್ದಾರೆ.
ಕೆಲ ಸಮಯದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಸದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.