ತುಮಕೂರು: ಪ್ರಸ್ತುತ ಸಂಪ್ರದಾಯದಂತೆ ಪಿತೃ ಪಕ್ಷ ಆಚರಣೆಗೆ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಶುಭ ಕಾರ್ಯಗಳಿಲ್ಲದೆ ಹಣ್ಣುಗಳ ದರ ಇಳಿಕೆಯತ್ತ ಸಾಗಿದ್ದು, ಹೂವಿನ ದರದಲ್ಲಿ ದಿಢೀರ್ ಕುಸಿತವಾಗಿದೆ. ಕೆಲ ಕಾಯಿಪಲ್ಲೆ ಹೊರತುಪಡಿಸಿ, ತರಕಾರಿಗಳ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಇದು ತುಮಕೂರು ಮಾರುಕಟ್ಟೆಯ ವಹಿವಾಟಿನ ಸ್ಥಿತಿಗತಿ.
ಮಳೆ ಇಲ್ಲದಿರುವುದು ಸೊಪ್ಪಿನ ಬೆಲೆ ಇಳಿಕೆಯಾಗಲು ಕಾರಣವಾಗಿದೆ. ಧಾನ್ಯಗಳ ಬೆಲೆ ಯಥಾಸ್ಥಿತಿಯಿದೆ. ಕಳೆದ ವಾರ ಇಳಿಕೆ ಕಂಡು ಬಂದಿದ್ದ ಮೊಟ್ಟೆ ಧಾರಣೆ ಈ ವಾರ ಕೊಂಚ ಏರಿಕೆ ಕಂಡಿದೆ. ಏರಿದ್ದ ಡ್ರೈ ಫ್ರೂಟ್ಸ್ ಬೆಲೆಗಳು ಹಳೆಯ ದರಗಳಲ್ಲಿಯೇ ಮುಂದುವರಿದಿವೆ.
ಕೇಂದ್ರ ಸರ್ಕಾರ ಖಾದ್ಯ ತೈಲದ ಆಮದು ಸುಂಕವನ್ನು ಕೊಂಚ ತಗ್ಗಿಸಿರುವುದರಿಂದ ಚಿಲ್ಲರೆ ಅಡುಗೆ ಎಣ್ಣೆ ಬೆಲೆ ತುಸು ತಗ್ಗಿದೆ. ಎಲ್ಲಾ ಬ್ರಾಂಡ್‍ಗಳ ಎಣ್ಣೆ ದರ ಕೆಜಿಗೆ ರೂ.5 ರಷ್ಟು ಕಡಿಮೆಯಾಗಿದ್ದು, ಸನ್ ಫ್ಲವರ್ 155 ರಿಂದ 150 ರೂ, ಪಾಮಾಯಿಲ್ 130 ರಿಂದ 125 ರೂ.ಗೆ ಇಳಿಕೆಯಾಗಿದೆ. ದಿನಸಿ-ಧಾನ್ಯಗಳ ಬೆಲೆಗಳಲ್ಲಿ ಕಳೆದ ವಾರಕ್ಕೂ ಈ ವಾರಕ್ಕೂ ಅಂತಹ ವ್ಯಾತ್ಯಾಸಗಳೇನು ಆಗಿಲ್ಲ.
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಏರಿಕೆಯಾಗಿದ್ದ ಬಾಳೆ ಹಣ್ಣಿನ ದರ ಇಳಿಯುವಂತೆ ಕಾಣುತ್ತಿಲ್ಲ. ಏಲಕ್ಕಿ ಬಾಳೆ, ಪಚ್ಚೆ ಬಾಳೆ, ನಾಟಿ ಎಲ್ಲಾ ವಿಧದ ಬಾಳೆ ಹಣ್ಣುಗಳ ದರ ಹೆಚ್ಚೆ ಇದೆ. ದಾಳಿಂಬೆ ಬೆಲೆ ಕೆಜಿಗೆ 20 ರೂ ಏರಿಕೆ ಕಂಡಿದ್ದರೇ, ಕರಬೂಜ, ಅನಾನಸ್ ದರಗಳು ಕೆಜಿಗೆ ತಲಾ 10 ರೂ. ಹೆಚ್ಚಳ ಕಂಡಿವೆ. ಉಳಿದಂತೆ ಇತರೆ ಹಣ್ಣುಗಳು ಹಿಂದಿನ ವಾರದ ಧಾರಣೆಯಲ್ಲಿಯೇ ಮಾರಾಟವಾಗುತ್ತಿವೆ. ಆದರೆ ಪಿತೃಪಕ್ಷ ಕಳೆದು ಆಯುಧ ಪೂಜೆಯ ವೇಳೆಗೆ ಹಣ್ಣಿನ ದರಗಳಲ್ಲಿ ಹೆಚ್ಚಳ ಆಗಬಹುದು ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಹಣ್ಣು ವ್ಯಾಪಾರಿ ಸುಂದರೇಶ್.