ತುಮಕೂರು:ಸಾಮಾಜಿಕ ಜಾಲತಾಣದಲ್ಲಿ ನಮ್ಮ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆಯಲಾಗಿದೆ. ನಾವು ಆನ್ಲೈನ್ನಲ್ಲಿ ಯಾರಿಗೂ ಅಪಾಯಿಂಟ್ಮೆಂಟ್ ಕೊಡುತ್ತಿಲ್ಲ. ನಕಲಿ ಅಕೌಂಟ್ನಿಂದ ಜನರು ಮೋಸಹೋಗಬೇಡಿ ಎಂದು ತಿಪಟೂರಿನ ಕುಮಾರ್ ಹಾಸ್ಪಿಟಲ್ನ ವೈದ್ಯ ಡಾ.ಶ್ರೀಧರ್ ತಿಳಿಸಿದ್ದಾರೆ.
ತಿಪಟೂರಿನ ಕುಮಾರ್ ಆಸ್ಪತ್ರೆ ಹೆಸರಿನಲ್ಲಿ ನಕಲಿ ವೆಬ್ಸೈಟ್ ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ತಿಪಟೂರಿನ ಕುಮಾರ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಯಿದೆ. ಸಾಮಾಜಿಕ ಸೇವೆ ರೂಪದಲ್ಲಿ 30 ಹಾಸಿಗೆಗಳನ್ನು ಉಚಿತವಾಗಿ ಕೊಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಹೀಗಾಗಿ, ನಾವು ಆನ್ಲೈನ್ನಲ್ಲಿ ಬುಕ್ ಮಾಡಿದ್ದೇವೆ ಎಂದು ಜನರು ದೂರವಾಣಿ ಕರೆ ಮಾಡಿ ಕೇಳುತ್ತಿದ್ದಾರೆ. ಅದು ನಕಲಿ ಅಕೌಂಟ್. ನಾವು ಆನ್ಲೈನ್ನಲ್ಲಿ ಯಾರಿಗೂ ಅಪಾಯಿಂಟ್ಮೆಂಟ್ ಕೊಡುತ್ತಿಲ್ಲ. ಇದಕ್ಕೆ ಯಾರೂ ಮರುಳಾಗಬೇಡಿ ಎಂದರು.
ಅಲ್ಲದೆ, ನಾವು ಸ್ಥಳೀಯ ಗ್ರಾಮಸ್ಥರಿಗೆ ಮಾತ್ರ ಉಚಿತ ಆಕ್ಸಿಜನ್ ಮತ್ತು ಔಷಧಿಗಳನ್ನು ನೀಡುತ್ತಿದ್ದೇವೆ. ರಾಜ್ಯಮಟ್ಟದಲ್ಲಿ ಇದನ್ನು ಮಾಡಿಲ್ಲ. ಬೆಂಗಳೂರು, ತುಮಕೂರಿನಿಂದ ಬರುವ ರೋಗಿಗಳಿಗೆ ಮಾಡಿರುವ ವ್ಯವಸ್ಥೆಯಲ್ಲ. ಸಾರ್ವಜನಿಕ ಆಸ್ಪತ್ರೆಯಿಂದ ಶಿಫಾರಸ್ಸಾಗುವ ರೋಗಿಗಳಿಗೆ ಹಾಗು ಆಕ್ಸಿಜನ್ ಅಗತ್ಯವಿರುವರಿಗೆ 3 ರಿಂದ 4 ಲೀ. ಆಕ್ಸಿಜನ್ ನೀಡಿದ್ರೆ ಗುಣವಾಗಲಿದ್ದಾರೆ ಎಂದು ಈ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಯಾವುದೇ ರೀತಿಯ ವೆಂಟಿಲೇಟರ್ ಸೇರಿದಂತೆ ಉನ್ನತ ವೈದ್ಯಕೀಯ ವ್ಯವಸ್ಥೆ ಮಾಡಿಕೊಂಡಿಲ್ಲ. ಇದೊಂದು ಎರಡನೇ ಕೇರ್ ಚಿಕಿತ್ಸಾ ಕೇಂದ್ರವಾಗಿದೆ.
ದೂರದ ಊರುಗಳಿಂದ ತಿಪಟೂರಿನ ಕುಮಾರ್ ಆಸ್ಪತ್ರೆಗೆ ಬರಬೇಡಿ. ರೋಗಿಗಳನ್ನು ಕರೆದುಕೊಂಡು ಓಡಾಡುವುದು ಅಪಾಯಕಾರಿ. ಅಂತಹವರು ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಎಂದಿದ್ದಾರೆ.
ಇದನ್ನೂ ಓದಿ:ಆಡಳಿತ ವಿರೋಧಿ ಅಲೆ ಸುಳಿವು ನೀಡಿತಾ ಉಪ ಚುನಾವಣಾ ಫಲಿತಾಂಶ...?