ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಗುಂಜನೂರು ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ಗ್ರಾಮದ ವೀರೇಂದ್ರ ಎಂಬಾತ ಆಕೆಯೊಂದಿಗೆ ನನಗೆ ಅಕ್ರಮ ಸಂಬಂಧವಿದೆ ಎಂದು ಊರು ತುಂಬಾ ಸುಳ್ಳು ಸುದ್ದಿ ಹಬ್ಬಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಈತನೇ ಈ ಮಹಿಳೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಕವಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗುಂಜನೂರಿನ ಕಾಳಪ್ಪ ಎಂಬುವರ ಜೊತೆ ಈಕೆಯ ಮದುವೆಯಾಗಿತ್ತು. ಕಾಳಪ್ಪ ತನ್ನ ಮನೆಯ ಮುಂದೆಯೇ ಕಿರಾಣಿ ಅಂಗಡಿ ಮಾಡಿಕೊಂಡಿದ್ದ. ತಾನು ಪೇಟೆಗೆ ಹೋಗುವಾಗ ಹೆಂಡತಿಯನ್ನು ಅಂಗಡಿಯಲ್ಲಿ ವ್ಯಾಪಾರಕ್ಕೆ ಕೂರಿಸಿ ಹೋಗ್ತಾ ಇದ್ದರು.
ಕಾಳಪ್ಪ ಪೇಟೆಗೆ ಹೋದಾಗ ಅದೇ ಗ್ರಾಮದ ವೀರೇಂದ್ರ ಎಂಬಾತ ಅಂಗಡಿಗೆ ಬಂದು ಕವಿತಾ ಜೊತೆ ಮಾತನಾಡುತ್ತಿದ್ದ. ಇದನ್ನೇ ಸಲುಗೆ ಪಡೆದ ವೀರೇಂದ್ರ ಕಾಳಪ್ಪನ ಹೆಂಡತಿ ನನ್ನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಎಲ್ಲರ ಬಳಿ ಹೇಳಿಕೊಂಡು ಓಡಾಡುತ್ತಿದ್ದ.
ವಿಷಯ ತಿಳಿದ ಕಾಳಪ್ಪ ಅಪಪ್ರಚಾರ ನಡೆಸದಂತೆ ತಿಳಿಸಿದ್ದಾನೆ. ಆದರೂ ವೀರೇಂದ್ರ ತನ್ನ ಬಳಿ ಕವಿತಾಳ ಅಶ್ಲೀಲ ವಿಡಿಯೋ ಇದೆ ಎಂದು ಹೇಳಿ ಹೆದರಿಸಿದ್ದಾನೆ. ಈ ಸಂಬಂಧ ಒಮ್ಮೆ ಗ್ರಾಮದ ದೇವಾಲಯದಲ್ಲಿ ಪಂಚಾಯಿತಿ ನಡೆಸಿ ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ ನೀಡಿ, ಹಾಗೇನಾದರೂ ಕವಿತಾ ಅಶ್ಲೀಲ ಪೋಟೋ, ವಿಡಿಯೋ ಇದ್ರೆ ಡಿಲೀಟ್ ಮಾಡುವಂತೆ ಸೂಚಿಸಿದ್ರು. ಆದರೂ ಬುದ್ದಿ ಕಲಿಯದ ವೀರೇಂದ್ರ ತನ್ನ ಜೊತೆ ಕವಿತಾಳನ್ನು ಕಳುಹಿಸಿ ಎಂದು ಕಾಳಪ್ಪ ಮನೆಗೆ ಬಂದು ಕೆಟ್ಟದಾಗಿ ವರ್ತಿಸಿದ್ದಾನೆ.
ಇದರಿಂದ ಬೇಸತ್ತ ವಿವಾಹಿತೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಕಾಳಪ್ಪ ಆಕೆಯನ್ನ ಸೊರಬ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಶಿಕಾರಿಪುರಕ್ಕೆ ಕರೆದು ಕೊಂಡು ಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಕವಿತಾ ಸಾವಿಗೆ ವೀರೇಂದ್ರ ಕಾರಣ ಎಂದು ಕಾಳಪ್ಪ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ:ತಕ್ಷಣ ಪಾನ್ಗೆ ಆಧಾರ್ ಲಿಂಕ್ ಮಾಡಿ, ನಾಳೆಯೇ ಕೊನೆಯ ದಿನ: ಹೀಗಿದೆ ವಿಧಾನ..