ಚಿಕ್ಕಮಗಳೂರು/ಶಿವಮೊಗ್ಗ: ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ರೈತರು ಹೈರಾಣಾಗಿದ್ದಾರೆ. ಕಾಡು ಪ್ರಾಣಿಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಳೆಕೊಡಿಗೆ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ನೂರಾರು ಬಾಳೆ ಗಿಡಗಳನ್ನು ಮುರಿದು ಹಾನಿ ಮಾಡಿವೆ. ಕಾಡಾನೆಗಳಿಂದ ಹೊಳೆ ಕುಡಿಗೆ ಗ್ರಾಮದ ಬಾಸಮ್ಮ, ರಮೇಶ್ ಗೌಡ, ಲಕ್ಷ್ಮಣ ಗೌಡ, ಸತೀಶ್ ಗೌಡ ಎಂಬುವರ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಅರಣ್ಯ ಇಲಾಖೆ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಾಡಾನೆಗಳು ದಾಳಿ ಮಾಡಿದ ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ರಂಗನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳೆ ಹಾನಿಯಾಗಿರುವ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.