ಶಿವಮೊಗ್ಗ:ಉಂಬ್ಳೆಬೈಲು ಗ್ರಾಮದ ಸುತ್ತಮುತ್ತಲಿನ ಕೃಷಿ ಭೂಮಿಗೆ ನುಗ್ಗಿ ರೈತರ ಫಸಲು ನಾಶ ಮಾಡುತ್ತಿದ್ದ ಕಾಡಾನೆಯನ್ನು ಕಾಡಿಗೆ ಓಡಿಸುವ ಎಲಿಫೆಂಟ್ ಡ್ರೈವಿಂಗ್ ಯಶಸ್ವಿಯಾಗಿ ಮುಗಿದಿದೆ.
ಕಾಡಾನೆ ಓಡಿಸುವ ಎಲಿಫೆಂಟ್ ಡ್ರೈವಿಂಗ್ ಯಶಸ್ವಿಯಾಗಿ ಮುಕ್ತಾಯ ಕಳೆದ ನಾಲ್ಕು ದಿನಗಳಿಂದ ಉಂಬ್ಳೆಬೈಲು ಅರಣ್ಯ ಪ್ರದೇಶದಲ್ಲಿ ಎಲಿಫೆಂಟ್ ಡ್ರೈವಿಂಗ್ ಕಾರ್ಯಾಚರಣೆ ನಡೆದಿದ್ದು, ಇಂದು ಸಕ್ರೆಬೈಲಿನ ಆನೆಗಳು ತಮ್ಮ ವಾಸಸ್ಥಾನಕ್ಕೆ ಮರಳಿವೆ. ಭದ್ರಾವತಿ ತಾಲೂಕಿನ ಉಂಬ್ಳೆಬೈಲು ಗ್ರಾಮ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ. ಈ ಗ್ರಾಮ ತುಂಗಾ ನದಿ ಹಾಗೂ ಭದ್ರಾ ಹಿನ್ನೀರಿನ ಮಧ್ಯ ಭಾಗದಲ್ಲಿದೆ. ಇಲ್ಲಿಗೆ ಭದ್ರಾ ಅಭಯಾರಣ್ಯದಿಂದ ಒಂದು ಆನೆ ಕುಟುಂಬವೇ ಬಂದಿತ್ತು. ಕಾಡಾನೆಗಳು ಕಾಡಾಂಚಿನ ಕೃಷಿ ಭೂಮಿಗೆ ಬಂದು ಬೆಳೆ ತಿಂದು, ತುಳಿದು ನಾಶ ಮಾಡುತ್ತಿವೆ. ಹೀಗಾಗಿ ಆನೆಗಳನ್ನು ಹಿಡಿಯಬೇಕು ಎಂಬುದು ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿತ್ತು.
ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳ ತಂಡ ಎಲಿಫೆಂಟ್ ಡ್ರೈವಿಂಗ್ಗೆ ತೆರಳಿದ್ದವು. ತಂಡದಲ್ಲಿ ಸಾಗರ, ಸೋಮಣ್ಣ ಹಾಗೂ ಬಾಲಣ್ಣ ಇದ್ದವು. ಸಾಕಷ್ಟು ಕಡೆ ಇಂತಹ ಕಾರ್ಯಾಚರಣೆಗೆ ಹೋಗಿದ್ದ ಸಾಗರ ಆನೆಯ ನಾಯಕತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಬಾಲಣ್ಣನಿಗೆ ಇದು ಎರಡನೇ ಅನುಭವವಾದ್ರೆ, ಸೋಮಣ್ಣನಿಗೆ ಇದು ಮೊದಲ ಅನುಭವವಾಗಿದೆ.
ಈ ಆನೆಗಳ ತಂಡದ ಜೊತೆಗೆ ಒಟ್ಟು 11 ಜನರ ತಂಡ ಆಗಮಿಸಿತ್ತು. ಆನೆಗಳು ಇರುವ ಕುರಿತು ಈ ತಂಡದವರು ಹೋಗಿ ಪರಿಶೀಲನೆ ನಡೆಸಿ, ಬರುತ್ತಾರೆ. ಅಲ್ಲಿ ಆನೆ ಇದ್ದ ಬಗ್ಗೆ ಸ್ವಲ್ಪ ಕುರುಹು ಇದ್ದರೂ ಸಾಕು ಆನೆಯನ್ನು ಹುಡುಕಿ, ಆನೆಯನ್ನು ಓಡಿಸುವ ಅಥವಾ ಹಿಡಿಯುವ ಕಾರ್ಯ ನಡೆಸುತ್ತಾರೆ. ಸದ್ಯ ಕಾಡಿನಿಂದ ಬಂದಿದ್ದ ಮೂರು ಆನೆಗಳನ್ನು ಓಡಿಸಲಾಗಿದೆ. ಆದರೆ, ಈ ಭಾಗದಲ್ಲಿ ಕಳೆದ ಐದಾರು ವರ್ಷಗಳಿಂದ ಒಂಟಿ ಸಲಗ ಒಂದು ಇದೆ. ಈ ಸಲಗ ಇದುವರೆಗೂ ಪ್ರಾಣ ಹಾನಿ ಮಾಡಿಲ್ಲ. ಆದರೆ, ತೋಟದ ಬೆಳೆ ನಾಶ ಮಾಡಿದೆ.
ಕ್ಯಾಂಪ್‌ನಲ್ಲಿ ವಾಸ್ತವ್ಯ: ಕಡೇಕಲ್ಲು ಅರಣ್ಯ ಕ್ಯಾಂಪ್‌ನಲ್ಲಿ ಆನೆಗಳು ತಮ್ಮ ವಾಸ್ತವ್ಯ ಹೂಡಿದ್ದವು. ಇಲ್ಲಿ ಸೊಪ್ಪು ಚೆನ್ನಾಗಿ ಇರುವುದರಿಂದ ಹಾಗೂ ಸಕ್ರೆಬೈಲು ಆನೆ ಕ್ಯಾಂಪ್‌ಗೂ ಇದು ಹತ್ತಿರವಾದ ಕಾರಣ ಇಲ್ಲಿ ಕ್ಯಾಂಪ್ ಹಾಕಲಾಗಿತ್ತು.