ಶಿವಮೊಗ್ಗ: ವಿಪರೀತ ಮಳೆಯಿಂದ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮದ ರೈತ ಶಂಕರಪ್ಪ ಮೃತ ಪಟ್ಟಿದ್ದರು. ಇದೇ ಕ್ಷೇತ್ರದ ಶಾಸಕರಾದ ಗೃಹ ಸಚಿವ ಆರಗ ಜ್ಞಾನೇಂದ್ರ ನಿನ್ನೆ ರಾತ್ರಿ ಮೃತರ ಮನೆಗೆ ಭೇಟಿ ನೀಡಿ, ಸರ್ಕಾರದ ವತಿಯಿಂದ 4 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು. ತಹಶೀಲ್ದಾರ್ ಶ್ರೀಪಾದ್ ಹಾಗೂ ಕಂದಾಯ ಅಧಿಕಾರಿಗಳು ಸಚಿವರ ಜೊತೆಗಿದ್ದರು.
ಮಳೆಹಾನಿ ಪ್ರದೇಶಕ್ಕೆ ಭೇಟಿ:ಶಿವಮೊಗ್ಗ ನಗರದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಗೃಹ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿನ್ನೆ ಬೆಳಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದು, ಬಾಪೂಜಿ ನಗರ, ವಿನಾಯಕ ನಗರ ಹಾಗೂ ಆರ್.ಎಂ.ಎಲ್ ನಗರ ಸೇರಿದಂತೆ ಅನೇಕ ಕಡೆ ಭೇಟಿ ನೀಡಿದರು. ಶಾಸಕ ಕೆ.ಎಸ್.ಈಶ್ವರಪ್ಪ ಇದ್ದರು.