ಶಿವಮೊಗ್ಗ: ಐದು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ಸಾಗರದಲ್ಲಿ ನಡೆದಿದೆ. ಸಾಗರ ನಗರಸಭೆ ವ್ಯಾಪ್ತಿಯ ನೆಹರೂ ನಗರದ ಗುಲಾಮುದ್ದಿನ್ ರಸ್ತೆಯಲ್ಲಿ ನಾಯಿ ದಾಳಿ ನಡೆಸಿದೆ. ಮಗುವಿನ ಮೇಲೆ ಬೀದಿ ನಾಯಿಯೊಂದು ಎರಗಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಗು ಮೇಲೆ ಬೀದಿ ನಾಯಿ ದಾಳಿ - ವೈರಲ್ ವಿಡಿಯೋ ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಐದು ವರ್ಷದ ಮಗು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಯೊಂದು ಏಕಾಏಕಿ ದಾಳಿ ಮಾಡಿದೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಅಟೋ ಚಾಲಕನ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ಮಗು ಪಾರಾಗಿದೆ. ಅಟೋ ಚಾಲಕ ನಾಯಿಯನ್ನು ಓಡಿಸಿ, ಮಗುವನ್ನು ರಕ್ಷಿಸಿದ್ದಾರೆ. ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸಾಗರದಲ್ಲಿ ಹೆಚ್ಚಾದ ಬೀದಿ ನಾಯಿಗಳ ಹಾವಳಿ:
ಸಾಗರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಡು ಹಿಂಡಾಗಿ ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುತ್ತಿದ್ದು, ಮಕ್ಕಳು, ಸಿಕ್ಕ ಸಿಕ್ಕವರನ್ನು ಕಚ್ಚಿ ಗಾಯಗೊಳಿಸುತ್ತಿವೆ. ಈ ಸಮಸ್ಯೆ ಬಗೆಹರಿಸುವಂತೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮನವಿ ಮಾಡಿಕೊಂಡರೂ ನಗರಸಭೆ ಕಿವಿಗೊಡುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಇದನ್ನೂ ಓದಿ:ಡೊಳ್ಳು ಹೊಟ್ಟೆ, ಹೃದಯ ಸಂಬಂಧಿ ಕಾಯಿಲೆಗಳಿಗೆ ಬ್ರೇಕ್ ಹಾಕಿದ ಸಿವಿಲ್ ಪೊಲೀಸರು
ಸಾಗರದ ಮೀನು ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳಾದ ನೆಹರೂ ನಗರ, ಗುಲಾಮುದ್ದಿನ ರಸ್ತೆ, ಶಿವಪ್ಪನಾಯಕ ನಗರ ಬಡಾವಣೆ, ಬೀಡಿ ಕ್ವಾರ್ಟಸ್, ಜನ್ನತ್ ನಗರ, ಗಾಂಧಿ ನಗರ , ರಾಮ ನಗರ, ಹೀಗೆ ನಗರದ ಪ್ರಮುಖ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಮಕ್ಕಳು ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವುದೇ ಕಷ್ಟವಾಗಿದೆ. ನಗರಸಭೆ ಬೀದಿ ನಾಯಿಗಳ ಹಾವಳಿ ತಡೆಯಲು ಕ್ರಮ ತೆಗೆದುಕೊಳ್ಳಬೇಕಿದೆ.