ಶಿವಮೊಗ್ಗ: ಬೇಸಿಗೆಯ ಈ ಅವಧಿಯಲ್ಲಿ ಹಾವುಗಳು ಹೆಚ್ಚಾಗಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿವೆ. ಆಹಾರ ಅರಸುತ್ತಾ ಉರಗಗಳು ಕಾಡಿನಿಂದ ನಾಡಿನತ್ತ ಬರುವುದು ಸಾಮಾನ್ಯವಾಗಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಮನೆಯೊಂದರ ಸ್ನಾನದ ಕೋಣೆಗೆ ನುಗ್ಗಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಮಂಡಗದ್ದೆ ಹೋಬಳಿಯ ಕೆರೆಕೊಪ್ಪದ ನಿವಾಸಿ ಆನಂದ ನಾಯ್ಕರ್ ಅವರ ಸ್ನಾನದ ಕೋಣೆಯಲ್ಲಿ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಹಾವನ್ನು ಕಂಡು ಭಯಭೀತರಾದ ಮನೆ ಮಾಲೀಕ, ಕೂಡಲೇ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಗ್ರಾಮಕ್ಕೆ ತೆರಳಿದ ಸ್ನೇಕ್ ಕಿರಣ್ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಕಾಳಿಂಗವನ್ನು ರಕ್ಷಿಸಿದರು.