ಮೈಸೂರು: ನಮ್ಮ ಪ್ರಧಾನಿ ನರೇಂದ್ರ ಮೋದಿ ತಾಯಿ ಹೃದಯದವರು. ಅವರಿಗೆ ಜನರ ಭಾವನೆಗಳು ಅರ್ಥವಾಗುತ್ತವೆ. ದಿನಬಳಕೆ ವಸ್ತುಗಳಿಗೆ ವಿಧಿಸಿರುವ ಜಿಎಸ್ಟಿಯನ್ನು ಕಡಿಮೆ ಮಾಡಬಹುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಚಾಮುಂಡಿ ಬೆಟ್ಟಕ್ಕೆ ಸಾರಿಗೆ ಬಸ್ನಲ್ಲಿ ಆಗಮಿಸಿ ತಾಯಿಯ ದರ್ಶನ ಪಡೆದ ನಂತರ ಮಾಧ್ಯಮಗಳ ಜೊತೆ ಮತನಾಡಿದ ಅವರು, ನಾನು ಪ್ರತಿ ವರ್ಷ ಆಷಾಢ ಮಾಸದಲ್ಲಿ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತೇನೆ. ಈ ಬಾರಿ ಚಾಮುಂಡೇಶ್ವರಿ ವರ್ಧಂತಿ ದಿನ ಬರಬೇಕೆಂದು ಎಲ್ಲರೂ ಹೇಳಿದ್ದರು. ಅದರಂತೆ ತಾಯಿಯ ದರ್ಶನ ಪಡೆದಿದ್ದೇನೆ ಎಂದರು.
ರಾಜ್ಯದಲ್ಲಿ ನೆರೆ ಪ್ರವಾಹದ ವಿಚಾರವಾಗಿ ಮಾತನಾಡಿ, ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರಕ್ಕೆ ಬಂದಿಲ್ಲ. ಸಂಪೂರ್ಣ ಪ್ರವಾಹ ತಗ್ಗಿದ ನಂತರ ಬೆಳೆ ನಷ್ಟ ಎಷ್ಟಾಗಲಿದೆ ಎಂದು ಗೊತ್ತಾಗಲಿದೆ. ಬಹಳಷ್ಟು ಜಿಲ್ಲೆಯ ರೈತರ ಬೆಳೆ ಕೊಚ್ಚಿ ಹೋಗಿದೆ. ಅವರಿಗೆ ಮತ್ತೊಮ್ಮೆ ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಕೊಟ್ಟ ರಸಗೊಬ್ಬರ ಮತ್ತು ಬೀಜ ನೀರುಪಾಲಾಗಿದೆ. ಇದರ ಬಗ್ಗೆ ಸಂಪೂರ್ಣ ವರದಿ ತರಿಸಿಕೊಳ್ಳುತ್ತೇನೆ. ನಮ್ಮ ಜಿಲ್ಲೆಯಲ್ಲೂ ಸಾಕಷ್ಟು ಬೆಳೆ ನಷ್ಟ ಉಂಟಾಗಿದೆ ಎಂದರು.
ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಮಂಗಳ ಸೋಮಶೇಖರ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:ವಿಐಪಿ ಪಾಸ್ ರದ್ದು, ಸಾರಿಗೆ ಬಸ್ನಲ್ಲಿ ಬಂದು ದೇವಿ ದರ್ಶನ ಪಡೆದ ಡಿ.ಕೆ.ಶಿವಕುಮಾರ್