ಮೈಸೂರು:ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಆಡುತ್ತಿದ್ದು, ಯಾವಾತ್ತಾದರೂ ಒಂದು ದಿನ ಸ್ಫೋಟ ಆಗುವ ಸಾಧ್ಯತೆ ಇದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಮುನ್ನಾ ದಿನವೇ ಅಭಿಮಾನಿಗಳು ಸಿದ್ದರಾಮಯ್ಯಗೆ ಬರ್ತಡೇ ಶುಭಾಶಯವನ್ನು ಮೈಸೂರಿನ ಮನೆಯಲ್ಲಿ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಎಂದಿಗೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ನಾನು ಹುಟ್ಟಿದ ದಿನ ನನ್ನ ಅಪ್ಪ, ಅಮ್ಮ, ಮೇಸ್ಟ್ರಿಗೂ ಗೊತ್ತಿಲ್ಲ. ನನ್ನ ಅಭಿಮಾನಿಗಳು, ಕಾರ್ಯಕರ್ತರು ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯ ಕೋರಲು ಬಂದಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ, ತಮಗೆ ಶಕ್ತಿ ಇರುವವರೆಗೂ ರಾಜಕೀಯ ಮಾಡುವುದಾಗಿ ತಿಳಿಸಿದ್ರು.
ಉತ್ತಮ ಆಡಳಿತ ನಡೆಸಲು ಸಾಧ್ಯವೇ?
ಸಚಿವ ಆನಂದ ಸಿಂಗ್ ರಾಜೀನಾಮೆ ವಿಚಾರ ಬಗ್ಗೆ ನಾನು ಟಿವಿಯಲ್ಲಿ ನೋಡಿದ್ದೇನೆ. ಮಂತ್ರಿಮಂಡಲ ರಚನೆಯಾದ ಮೇಲೆ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಯಾವಾತ್ತಾದರೂ ಅದು ಸ್ಫೋಟ ಆಗುವ ಸಾಧ್ಯತೆ ಇದೆ. ಬಿಜೆಪಿಯವರಿಗೆ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೇಲೆ ಗೌರವವಿಲ್ಲ. ಇಂತಹವರಿಂದ ಯಾವ ರೀತಿ ಉತ್ತಮ ಆಡಳಿತ ನಡೆಸಲು ಸಾಧ್ಯ? ಎಂದು ಬೊಮ್ಮಾಯಿ ಸರ್ಕಾರವನ್ನು ಟೀಕಿಸಿದರು.
ಜಮೀರ್-ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ:
ಜಮೀರ್ ಜೊತೆ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದಾರೆ ಎಂಬುದು ಮಾಧ್ಯಮದವರ ಸೃಷ್ಟಿ. ಆ ರೀತಿ ಏನೂ ಆಗಿಲ್ಲ. ಜಮೀರ್ ಅಜ್ಮೀರ್ಗೆ ಹೋಗಿದ್ದರು. ಅವರು ಬಂದ ನಂತರ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದಾರೆ. ಈ ವಿಚಾರವಾಗಿ ಯಾವುದೇ ರೀತಿ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಜಮೀರ್ ಮತ್ತು ತಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಲಿ:
ಮೇಕೆದಾಟು ಯೋಜನೆ ಸಂಬಂಧ ನಮ್ಮ ಕಾಲದಲ್ಲೇ ಡಿ.ಪಿ.ಆರ್ ಆಗಿತ್ತು. ಈ ಬಗ್ಗೆ ಈಗಿನ ಸರ್ಕಾರಕ್ಕೆ ಬದ್ಧತೆ ಇದ್ದರೆ ಕೇಂದ್ರದ ಟ್ರಿಬ್ಯೂನಲ್ ಬಳಿ ಹೋಗಿ ಅನುಮತಿ ಪಡೆಯಲಿ. ಅದನ್ನು ಬಿಟ್ಟು ರಾಜ್ಯ ಸರ್ಕಾರದವರು ತಮಿಳುನಾಡಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರೆ ಹೇಗೆ ? ಮೊದಲು ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಲಿ ಎಂದು ಒತ್ತಾಯಿಸಿದರು.
ಈಶ್ವರಪ್ಪನಿಗೆ ಕನಸೇ ಬೀಳುವುದಿಲ್ಲವೇ?
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗಿನಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕೆಟ್ಟ ಕನಸು ಬೀಳುತ್ತಿವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿ, ಈಶ್ವರಪ್ಪನಿಗೆ ಕನಸೇ ಬೀಳುವುದಿಲ್ಲವೇ? ಎಂದು ವ್ಯಂಗ್ಯವಾಡಿದರು. ಬಿಜೆಪಿ ಯಾವತ್ತೂ ಹಿಂದುಳಿದ ವರ್ಗದ ಪರವಾಗಿ ಇಲ್ಲ. ಜಾತಿ ಗಣತಿ ಮಾಡಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.