ಮೈಸೂರು:ಒಂದೇ ಕುಟುಂಬದ ಮೂವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆಬಾಲಕನಿಗೆ ಕಾರು ನೀಡಿದ್ದ ತಂದೆ ಜೈಲು ಪಾಲಾಗಿದ್ದು, ಬಾಲಕನನ್ನು ಬಾಲ ಮಂದಿರಕ್ಕೆ ಸೇರಿಸಲಾಗಿದೆ. ಈ ರೀತಿಯ ಪ್ರಕರಣ ಜಿಲ್ಲೆಯಲ್ಲಿ ಇದೆ ಮೊದಲು ಎನ್ನಲಾಗಿದೆ.
ಅಪ್ರಾಪ್ತ ಬಾಲಕನ ಅಪಘಾತ ಪ್ರಕರಣ ಕಳೆದ ಗುರುವಾರ ರಾತ್ರಿ ಸುಮಾರು 10:30ರ ಸಂದರ್ಭದಲ್ಲಿ ಮೈಸೂರು - ಬೆಂಗಳೂರು ರಸ್ತೆಯ ದಂಡಿಮಾರಮ್ಮನ ದೇವಸ್ಥಾನದ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಮೂರು ವರ್ಷದ ಮಗು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಓದಿ-ಮೈಸೂರಿನಲ್ಲಿ ಕಾರು - ಬೈಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸಾವು
ಕಾರಿನ ಗುರುತು ನೀಡಿದ 'ಐಡಿ ಕಾರ್ಡ್'
ಅಪಘಾತದ ನಂತರ ಹೆದರಿದ ಬಾಲಕ ತಮ್ಮ ಕುಟುಂಬದವರಿಗೆ ಕರೆ ಮಾಡಿ ಕಾರನ್ನು ಅಲ್ಲಿಯೇ ಬಿಟ್ಟು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ತಕ್ಷಣ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಹಾಗೂ ಸಂಚಾರಿ ಮತ್ತು ಅಪರಾಧ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ತನಿಖೆಕೈಗೊಂಡು ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ನದೀಮ್ ಎಂಬ ವ್ಯಕ್ತಿಗೆ ಸಂಬಂಧಿಸಿದ ಐಡಿ ಕಾರ್ಡ್ ದೊರಕಿತ್ತು.
ಓದಿ-ಒಂದೇ ಕುಟುಂಬದ ಮೂವರ ಸಾವು ಪ್ರಕರಣಕ್ಕೆ ಟ್ವಿಸ್ಟ್: ಅಪಘಾತಕ್ಕೆ ಬಾಲಕ ಕಾರಣವಂತೆ!
ಕಾರ್ ಶೋ ರೂಮ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ನದೀಮ್ ಟ್ರೈಯಲ್ಗಾಗಿ ಇಟ್ಟಿದ್ದ ಕಾರನ್ನು ಸಂಜೆ ಮನೆಗೆ ತೆಗೆದುಕೊಂಡು ಹೋಗಿದ್ದ. ಆ ಸಂದರ್ಭದಲ್ಲಿ ನದೀಮ್ನ 14 ವರ್ಷದ ಮಗ ಕಾರನ್ನು ತೆಗೆದುಕೊಂಡು ಹೋಗಿ ಅಪಘಾತ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ತಂದೆಯ ಬೇಜಾವಾಬ್ದಾರಿಗೆ ಜೈಲು ಶಿಕ್ಷೆ
ತಂದೆಯ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಸೆಕ್ಷನ್ 304ರ ಪ್ರಕಾರ ತಂದೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ಅಪ್ರಾಪ್ತನನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.