ಮೈಸೂರು: ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ್ದು, ಮಧ್ಯಸ್ಥಿಕೆ ವಹಿಸುವಂತೆ ಉಕ್ರೇನ್ ಭಾರತಕ್ಕೆ ಮನವಿ ಮಾಡಿದೆ. ಆದ್ರೆ ಈ ಸಂದರ್ಭದಲ್ಲಿ ಭಾರತ ಮಧ್ಯಸ್ಥಿಕೆ ವಹಿಸುವುದು ಸುಲಭವಲ್ಲ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಏನು ಮಾಡಬೇಕೆಂದು ಗೊತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ರಷ್ಯಾ ಅಧ್ಯಕ್ಷರೇ ನಮ್ಮ ಪ್ರಧಾನಿಗೆ ಕರೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರದ ಬಗ್ಗೆ ಯಾವ ರೀತಿ ನಿರ್ಧಾರ ಕೈಗೊಳ್ಳಬೇಕು ಎಂದು ಮೋದಿಯವರಿಗೆ ಗೊತ್ತಿದೆ. ಭಾರತ ಸರ್ಕಾರ ಹಾಗೂ ಮೋದಿಯವರಿಗೆ ಸಲಹೆ ಕೊಡುವಷ್ಟು ದೊಡ್ಡವನು ನಾನಲ್ಲ. ಮೋದಿ ಮತ್ತು ಪುಟಿನ್ ನಡುವೆ ಒಳ್ಳೆಯ ಸಂಬಂಧವಿದೆ. ಆದ್ರೆ ಅವರ ನಡುವಿನ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ.
ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಅವರವರ ದೇಶದ ವಿಚಾರವಾಗಿ ಸ್ವಾರ್ಥ ಮುಖ್ಯ. ಉಕ್ರೇನ್ ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಷ್ಯಾ ಮುಂದಾಗಿದೆ. ಈ ಹಿಂದೆ ಅಮೆರಿಕ ಕೂಡ ಯಾವೆಲ್ಲಾ ನಿರ್ಧಾರ ಕೈಗೊಂಡಿತ್ತು ಎಂದು ಗೊತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಅಷ್ಟು ಸುಲಭವಾಗಿ ಬಗೆಹರಿಸುವುದು ಸಾಧ್ಯವಿಲ್ಲ ಎಂದರು.