ಮೈಸೂರು: ಕೆಲಸದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಆರ್.ನಾಗೇಂದ್ರ ಅವರ ಅಂತಿಮ ದರ್ಶನವನ್ನ ವೈದ್ಯಕೀಯ ಸಚಿವ ಡಾ. ಕೆ.ಸುಧಾಕರ್ ಪಡೆದರು.
ಆರೋಗ್ಯಾಧಿಕಾರಿಯ ಅಂತಿಮ ದರ್ಶನ ಪಡೆದ ಡಾ.ಸುಧಾಕರ್... ಸಚಿವರಿಗೆ ವೈದ್ಯೆಯಿಂದ ತರಾಟೆ ನಂತರ ಜಿಲ್ಲಾ ಆರೋಗ್ಯಾಧಿಕಾರಿ ಬಳಿ ಮಾಹಿತಿ ಪಡೆಯಲು ಆಗಮಿಸಿದ ಸುಧಾಕರ್ ಅವರಿಗೆ ವೈದ್ಯೆ ತರಾಟೆಗೆ ತೆಗೆದುಕೊಂಡರು. 30 ಲಕ್ಷ ಪರಿಹಾರ ಕೊಟ್ಟು ಸಮಾಧಾನ ಮಾಡ್ತೀರೇನ್ರಿ? ನಿಮ್ಮದು ಒಂದು ಸರ್ಕಾರನೇನ್ರಿ, ನನಗೆ ನಮ್ಮ ನಾಗೇಂದ್ರ ಬೇಕು ಎಂದು ಕಣ್ಣೀರು ಹಾಕಿದರು.
ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಬೇಕು. ಕೂಡಲೇ ಅವರು ಅಮಾನತಾಗಬೇಕು. ದೂರು ದಾಖಲಾಗದೆ ಪೊಲೀಸರು ನಾಗೇಂದ್ರ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಕೂಡಲೇ ಮೊಬೈಲ್ ವಾಪಸ್ ನೀಡಿ, ನ್ಯಾಯಾಂಗ ತನಿಖೆಗೆ ಆದೇಶಿಸಿ ಎಂದು ಸಚಿವರಿಗೆ ಒತ್ತಾಯಿಸಿದರು.
ಸಚಿವರಿಗೆ ವೈದ್ಯರ ಮನವಿ: ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಯಾರೂ ಕೆಲಸ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ನಾವು ಕೆಲಸಕ್ಕೆ ಹೋಗುವುದಿಲ್ಲ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯ ಯಾವ ವೈದ್ಯರೂ ಕೆಲಸ ಮಾಡುವುದಿಲ್ಲ. ತುರ್ತು ಚಿಕಿತ್ಸೆ ಹೊರತುಪಡಿಸಿ ಯಾವುದೇ ಚಿಕಿತ್ಸೆ ನೀಡುವುದಿಲ್ಲ ಎಂದು ವೈದ್ಯರು ಸಚಿವರಿಗೆ ಮನವಿ ಮಾಡಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಸುಧಾಕರ್, ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ನಿರ್ಧರಿಸಿದೆ. ಪಾರದರ್ಶಕ ತನಿಖೆ ನಡೆಸಲಾಗುವುದು. ನಾಳೆ ಯಾವ ರೀತಿ ತನಿಖೆ ನಡೆಸಬೇಕು ಅಂತ ನಿರ್ಧಾರ ಮಾಡುತ್ತೇವೆ. ಮೃತರ ಪತ್ನಿಗೆ ಉಪನ್ಯಾಸಕಿ ಹುದ್ದೆ ನೀಡಲಾಗುವುದು. ಈಗಾಗಲೇ ಸರ್ಕಾರ 30 ಲಕ್ಷ ಪರಿಹಾರ ಘೋಷಣೆ ಮಾಡಿದೆ. ನಾಳೆ ಸಿಎಂ ಜೊತೆ ಚರ್ಚೆ ಮಾಡಿ ಅಧಿಕಾರಿ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಮಾಡಲಾಗುವುದು. ಇದು ಉದ್ದೇಶ ಪೂರ್ವಕವಾಗಿ ನಡೆದಿರುವ ಘಟನೆ ಅಲ್ಲ. ಈ ಸಂದರ್ಭದಲ್ಲಿ ಎಲ್ಲರಿಗೂ ಕೆಲಸದ ಒತ್ತಡ ಇದೆ. ಕೆಲಸದ ಒತ್ತಡವನ್ನ ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.