ಮೈಸೂರು: ನಾವು 17 ಜನ ಮತ್ತೆ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇವೆ ಎಂದು ಅಪ್ಲಿಕೇಶನ್ ಹಾಕಿಲ್ಲ ಅಂತಾ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.
ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ಬಿಜೆಪಿ ಸೇರಿರುವ 17 ಜನ ಮತ್ತೆ ಕಾಂಗ್ರೆಸ್ಗೆ ಬಂದರೆ ಸೇರಿಸಿಕೊಳ್ಳುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ನಾವು ಯಾರು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇವೆ ಎಂದು ಅಪ್ಲಿಕೇಶನ್ ಹಾಕಿಲ್ಲ ಅಥವಾ ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ಹೋಗಿಲ್ಲ. ಸಿದ್ದರಾಮಯ್ಯನವರೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋದವರು. ಬಿಜೆಪಿ ಪಕ್ಷ ನಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿದೆ. ನಾವು ಸಹ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಸಮನ್ವಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸೋಮಶೇಖರ್ ವಾಗ್ದಾಳಿ ನಡೆಸಿದರು.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್ ಇನ್ನು ಶಾಸಕ ಯತ್ನಾಳ್ ನಿಮ್ಮ ಸಂಪರ್ಕದಲ್ಲಿ ಇದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಯಾವತ್ತೂ ಡಬಲ್ ಗೇಮ್ ರಾಜಕಾರಣ ಮಾಡುವುದಿಲ್ಲ. ಯಾರೇ ಆಗಲಿ ಹಾದಿ ಬೀದಿಯಲ್ಲಿ ಮಾತನಾಡಬಾರದು ಎಂದು ಹೇಳಿದ್ದೇನೆ. ಯಾರ ಪರವಾಗಿಯೂ ನಾನು ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ನಿಂದ ಮೃತಪಟ್ಟ ಕುಟುಂಬದವರ ಸಾಲ ಮನ್ನಾ ವಿಚಾರದಲ್ಲಿ ಅಂಕಿ ಅಂಶ ಸಂಗ್ರಹಿಸಲು ತಿಳಿಸಿದ್ದು, ಮುಂದಿನ 3 ದಿನಗಳಲ್ಲಿ ಮಾಹಿತಿ ಸಿಗಲಿದೆ. ಈ ಕುರಿತು ಸಿಎಂ ಜೊತೆ ಮಾತನಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಸಹಕಾರಿ ಸಚಿವಾಲಯ ರಚನೆಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯಕ್ಕೆ ಬೇಕಾದ ಸವಲತ್ತುಗಳನ್ನು ನೇರವಾಗಿ ಸಹಕಾರಿ ಇಲಾಖೆಗೆ ಕೇಳಿ, ಹೆಚ್ಚಿನ ಅನುದಾನ ಪಡೆಯಬಹುದು. ಇದೊಂದು ಐತಿಹಾಸಿಕ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.