ಮೈಸೂರು: ನಾನು ಸದಾ ಇಲ್ಲೇ ಇರಬೇಕು ಎಂದು ಬಂದಿಲ್ಲ. ಉಸ್ತುವಾರಿ ಸ್ಥಾನದಲ್ಲೇ ಮುಂದುವರಿಯಬೇಕು ಎಂದು ಯಾವತ್ತೂ ಪಟ್ಟು ಹಿಡಿದಿಲ್ಲ. ಜಿಲ್ಲೆಯ ಉಸ್ತುವಾರಿ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಂಪುಟ ಪುನರ್ ರಚನೆ ಅಥವಾ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಸಿಎಂ ತೀರ್ಮಾನ ಮಾಡುತ್ತಾರೆ ಎಂದ ಅವರು, ಮೈಸೂರು ಉಸ್ತುವಾರಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದ್ದರೆ ನಾನು ಸಂತೋಷ ಪಡುತ್ತೇನೆ. ನಾನು ಸದಾ ಇಲ್ಲೇ ಇರಬೇಕೆಂದು ಬಯಸಿಲ್ಲ. ಅಥವಾ ನನಗೆ ಉಸ್ತುವಾರಿ ಸ್ಥಾನ ಬೇಕೆಂದು ಪಟ್ಟು ಹಿಡಿದಿಲ್ಲ. ಬೇರೆಯವರಿಗೆ ಕೊಟ್ಟರೆ ಸಂತೋಷ. ಯಡಿಯೂರಪ್ಪನವರು ನನಗೆ ಉಸ್ತುವಾರಿ ಸ್ಥಾನ ಕೊಟ್ಟಿದ್ದರು, ಅದನ್ನು ಬೊಮ್ಮಾಯಿಯವರು ಮುಂದುವರೆಸಿದ್ದರು. ಕೊಟ್ಟ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದೇನೆ. ಉಸ್ತುವಾರಿ ಬದಲಾವಣೆ ಏನಿದ್ದರೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.