ಮಂಗಳೂರು:ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಪ್ರಕೃತಿ ವಿಕೋಪದಿಂದ ತೊಂದರೆಯಾಗಿರುವ ಸಂತ್ರಸ್ತರಿಗೆ ಸರ್ಕಾರ ನಿರೀಕ್ಷೆಯ ಮಟ್ಟದ ಪರಿಹಾರ ಕೊಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪ ಮಾಡಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಮಾತ್ರವಲ್ಲ ದೇಶದ ಹಲವು ಕಡೆಗಳಲ್ಲಿ ಹಾಗೂ ಕರ್ನಾಟಕದಾದ್ಯಂತ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದಿರುವುದು ಬಹಳ ಆಶ್ಚರ್ಯಕರ ಸಂಗತಿ. ಕಳೆದ ಬಾರಿ ಭೀಕರ ಪ್ರವಾಹದ ಸಂದರ್ಭ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಮಾಡಿ, ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಯವರ ಮನವಿಗೆ ಸ್ಪಂದಿಸಿ ತಕ್ಷಣ ಎರಡು ಸಾವಿರ ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದರು.
ಆದರೆ ಇಂದಿನ ಕೇಂದ್ರ ಸರಕಾರದ ತಂಡ ಕೇವಲ ವೈಮಾನಿಕ ಸಮೀಕ್ಷೆ ನಡೆಸಿದೆಯೇ ಹೊರತು, ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ನೇಮಕಗೊಂಡಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಹೊಡೆತ ಬೀಳಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ರಮಾನಾಥ್ ರೈ ಪ್ರತಿಕ್ರಿಯಿಸಿ, ಕಾಂಗ್ರೆಸ್ಗೆ ಹೊಡೆತ ಇಲ್ಲ ಆದರೆ ಬಿಜೆಪಿಗೆ ಹೊಡೆತ ಬೀಳಬಹುದು ಎಂದು ಉತ್ತರಿಸಿದರು.
ಈ ಸಂದರ್ಭ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಹಾಗೂ ಪರಿಶೀಲನೆ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 31 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಗ್ಗೆ ಮಂಗಳೂರಿಗೆ ಆಗಮಿಸುವ ಅವರು ಪಚ್ಚನಾಡಿಯ ತ್ಯಾಜ್ಯ ಘಟಕ ಕುಸಿದು ತತ್ತರಗೊಂಡ ಮಂದಾರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಬೆಳ್ತಂಗಡಿ ತಾಲೂಕಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದರು.