ಮಂಗಳೂರು:ಮಂಗಳೂರಿನ ಹೊರವಲಯದಲ್ಲಿರುವ ಗಂಜಿಮಠದ ಬಳಿಯ ಮಳಲಿ ಮಸೀದಿ ನವೀಕರಣ ವೇಳೆ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಡೆದ ತಾಂಬೂಲ ಪ್ರಶ್ನೆ ಮುಕ್ತಾಯವಾಗಿದ್ದು, ಅಷ್ಟಮಂಗಲ ನಡೆಸಲು ಸೂಚಿಸಲಾಗಿದೆ. ಮಳಲಿಯ ಶ್ರೀರಾಮಂಜನೇಯ ಭಜನಾ ಮಂದಿರದಲ್ಲಿ ಇಂದು ಬೆಳಗ್ಗೆ 9.05ಕ್ಕೆ ಕೇರಳದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಅವರು ತಾಂಬೂಲ ಪ್ರಶ್ನೆ ನಡೆಸಿಕೊಟ್ಟರು. 10.30 ರ ಸುಮಾರಿಗೆ ತಾಂಬೂಲ ಪ್ರಶ್ನೆ ಮುಕ್ತಾಯವಾಗಿದೆ.
ಈ ತಾಂಬೂಲ ಪ್ರಶ್ನೆಯಲ್ಲಿ ಪುರಾತನ ಕಾಲದಲ್ಲಿ ಗುರುಮಠ ಇದ್ದ ಬಗ್ಗೆ ಗೋಚರವಾಗಿದ್ದು, ಶಿವ, ದೇವಿ ಸಾನಿಧ್ಯ ಇತ್ತು ಎಂಬುದು ತಿಳಿದುಬಂದಿದೆ. ಹಿಂದಿನ ಕಾಲದಲ್ಲಿ ನಡೆದ ವಿವಾದ (ವೈಷ್ಣವ ಮತ್ತು ಶೈವ) ದಿಂದ ಇದು ನಾಶವಾಗಿದೆ. ಆ ಸಂದರ್ಭದಲ್ಲಿ ಅಲ್ಲಿ ಆರಾಧನೆ ಮಾಡುತ್ತಿದ್ದವರು ಅಲ್ಲಿಂದ ಸ್ಥಳಾಂತರ ಮಾಡಿದ್ದಾರೆ. ಆದರೆ ಪೂರ್ತಿಯಾಗಿ ಇಲ್ಲಿಂದ ಸಾನಿಧ್ಯ ಹೋಗಿಲ್ಲ. ಈ ಹಿನ್ನೆಲೆಯಲ್ಲಿ ಅದು ಈಗ ಗೋಚರಕ್ಕೆ ಬಂದಿದೆ. ಇದನ್ನು ಎಲ್ಲರೂ ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ಜೀರ್ಣೋದ್ಧಾರ ಮಾಡಬೇಕು. ದೇವಾಲಯದ ಎಲ್ಲಾ ವಿಚಾರಗಳು ತಿಳಿಯಲು ಅಷ್ಟಮಂಗಲ ಇಡಬೇಕು. ಇದಕ್ಕಾಗಿ ಗಣಪತಿ ಹವನ, ಪೊಳಲಿಯಲ್ಲಿ ಪ್ರಾರ್ಥನೆ, ನಾರಾಯಣ ಸ್ವಾಮಿ ಮಠದಲ್ಲಿ ಪ್ರಾರ್ಥನೆ ಸೇವೆ ಮತ್ತು ವೃತವನ್ನು ಮಾಡಿದ ಬಳಿಕ ಅಷ್ಟಮಂಗಲ ನಡೆಸುವಂತೆ ತಿಳಿದುಬಂದಿದೆ.