ಮಂಗಳೂರು:ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಮಂಗಳೂರಿನ ಶ್ರೀಕ್ಷೇತ್ರ ಕದ್ರಿ ದೇವಳ ಅಕ್ಷರಶಃ ನಂದಗೋಕುಲವಾಯಿತು. ಎಲ್ಲಿ ನೋಡಿದರೂ ಕೃಷ್ಣನೇ ಕಾಣ ಸಿಗುತ್ತಿದ್ದ. ಮಕ್ಕಳು ಶ್ರೀಕೃಷ್ಣ, ರುಕ್ಮಿಣಿ, ರಾಧೆಯರ ವೇಷಭೂಷಣ ಧರಿಸಿ ನೆರೆದಿದ್ದವರ ಮನಸೆಳೆದರು.
ಮೂವತ್ತೈದು ವರ್ಷಗಳಿಂದ ಇಲ್ಲಿನ ಕಲ್ಕೂರ ಪ್ರತಿಷ್ಠಾನವು ಜನ್ಮಾಷ್ಟಮಿಯಂದು ಮಕ್ಕಳಿಗೆ ಕೃಷ್ಣನ ವೇಷ ಸ್ಪರ್ಧೆ ಆಯೋಜಿಸುತ್ತಿದೆ. ಇಂದು ಅದು ರಾಷ್ಟ್ರೀಯ ಮಕ್ಕಳ ಉತ್ಸವ ಎಂದು ಪರಿವರ್ತನೆ ಹೊಂದಿದೆ. ಈ ಬಾರಿಯೂ ಸಾವಿರಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಶ್ರೀಕೃಷ್ಣ ಜನ್ಮಾಷ್ಟಮಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ಎರಡು ತಿಂಗಳ ಮಕ್ಕಳಿಂದ ಹಿಡಿದು ಹೈಸ್ಕೂಲ್ವರೆಗಿನ ಮಕ್ಕಳೂ ಸ್ಪರ್ಧಿಗಳಾಗಿದ್ದರು. ಅಲ್ಲದೆ, ಮಕ್ಕಳ ತಾಯಿ ಯಶೋಧೆ ಪಾತ್ರದಲ್ಲೂ ಕಾಣಿಸಿಕೊಂಡರು. ಇಲ್ಲಿ ಕಂದಕೃಷ್ಣ, ಮುದ್ದುಕೃಷ್ಣ, ಶ್ರೀಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಗೀತಾ ಕೃಷ್ಣ, ರಾಧಾ ಕೃಷ್ಣ, ರಾಧಾ ಮಾಧವ, ಯಕ್ಷ ಕೃಷ್ಣ, ಯಶೋಧಾ ಕೃಷ್ಣ, ದೇವಕಿ ಕೃಷ್ಣನ ಉಡುಪು ಧರಿಸಿ ಮಕ್ಕಳು ಮಿಂಚಿದರು.
ಬೆಳಗ್ಗೆ 9.30 ಗಂಟಗೆ ಆರಂಭವಾದ ಸ್ಪರ್ಧೆ ರಾತ್ರಿವರೆಗೂ ನಡೆಯಿತು. ಇಂದು ಮಳೆಯಿದ್ದರೂ ಮಕ್ಕಳು, ಪೋಷಕರು ಅತ್ಯುತ್ಸಾಹದಿಂದ ಭಾಗವಹಿಸಿದ್ದು ವಿಶೇಷವೆನಿಸಿತು. ದೇವ ಮಾನವನ ಬಗೆಬಗೆಯ ಮಾನುಷ ರೂಪವ ಕಂಡು ಜನರು ಪುಳಕಿತರಾದರು.