ಮಂಗಳೂರು: ಪೊಲೀಸ್ ಇಲಾಖೆ ಸೇರ್ಪಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ಹಮ್ಮಿಕೊಂಡಿರುವ ಒಂದು ತಿಂಗಳ ತರಬೇತಿ ಕಾರ್ಯಾಗಾರದ ಸ್ಕ್ರೀನಿಂಗ್ ಪರೀಕ್ಷೆಗೆ ನಕ್ಸಲ್ ಪೀಡಿತ ಭಾಗದ 22 ಮಂದಿ ಸೇರಿದಂತೆ 710 ಅಭ್ಯರ್ಥಿಗಳು ಹಾಜರಾಗಿದ್ದಾರೆ.
ನಕ್ಸಲ್ ಪೀಡಿತ ಭಾಗದ 22 ಮಂದಿ ಸೇರಿ 710 ಜನ ಪೊಲೀಸ್ ತರಬೇತಿ ಸ್ಕ್ರೀನಿಂಗ್ ಟೆಸ್ಟ್ ಗೆ ಹಾಜರು - Mangalure City Police Commissioner Shashikumar
ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸರು ಒಂದು ತಿಂಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ.
ಈ ಸ್ಕ್ರೀನಿಂಗ್ ಪರೀಕ್ಷೆಯನ್ನು ನಗರದ ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಶುಕ್ರವಾರ ಸಂಜೆ ನಡೆಸಲಾಯಿತು. ಈ ವೇಳೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ದ.ಕ.ಜಿಲ್ಲೆಯ ಅಭ್ಯರ್ಥಿಗಳ ನಿರಾಸಕ್ತಿಯನ್ನು ಮನಗಂಡು ಈ ವಿನೂತನ ಪ್ರಯೋಗ ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಹುದ್ದೆಗೆ ಸೇರ್ಪಡೆಗೊಳ್ಳುವ ಜಿಲ್ಲೆಯ ಅಭ್ಯರ್ಥಿಗಳಿಗೆ ಒಂದು ತಿಂಗಳ ಕಾಲ ಉಚಿತ ತರಬೇತಿ ಕಾರ್ಯಾಗಾರವನ್ನು ನಡೆಸುವ ಭರವಸೆ ನೀಡಿ, ಅರ್ಜಿ ಆಹ್ವಾನಿಸಿದ್ದರು. ಇದೀಗ ನಿರೀಕ್ಷೆಗಿಂತಲೂ ಅಧಿಕ ಮಂದಿ ತರಬೇತಿಗೆ ಹಾಜರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಟಾಪರ್ಗಳಾದ 200 ಮಂದಿಯನ್ನು ತರಬೇತಿ ಕಾರ್ಯಾಗಾರಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.